ಸಚಿವ ಬೈರತಿ ಸುರೇಶ್ ಬಂಧಿಸಿದರೆ ಮುಡಾ ಕಡತ ರಹಸ್ಯ ಬಯಲು: ಶೋಭಾ ಕರಂದ್ಲಾಜೆ ಆಗ್ರಹ | Shobha Karandlaje

ವಿಜಯವಾಣಿ-2024-10-19T125107.455
Published on

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮೈಸೂರು ನಗರಾಭಿವೃದ್ಧಿ ಕಡತಗಳ ರಹಸ್ಯ ಬಯಲಾಗಲಿದೆ. ಮುಡಾ ಕಚೇರಿಯಿಂದ ಎಷ್ಟು ಕಡತಗಳನ್ನು ಹೊತ್ತುಕೊಂಡು ಬಂದರು, ಎಲ್ಲಿ ಸುಟ್ಟು ಹಾಕಿದರು ಎನ್ನುವುದು ತಿಳಿಯಲು ತನಿಖಾ ಸಂಸ್ಥೆಗಳು ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನನಗೆ ಲಭ್ಯ ಮಾಹಿತಿ ಪ್ರಕಾರ ಅಕ್ರಮ ಹೊರಬಂದ ನಂತರ ಮುಡಾ ಕಚೇರಿಗೆ ತರಾತುರಿಯಲ್ಲಿ ಬೈರತಿ ಸುರೇಶ್ ತೆರಳಿದ್ದರು. 1997ರಿಂದ ಕಚೇರಿಯಲ್ಲಿದ್ದ ಕಡತಗಳನ್ನು ಎತ್ತಿಕೊಂಡು ಬಂದು, ಸುಟ್ಟು ಹಾಕಿದ್ದಾರೆ. ಶುದ್ಧರಾಮಯ್ಯ ಎಂದು ಹೇಳಿಕೊಳ್ಳುತ್ತಿದ್ದ‌ ಸಿದ್ದರಾಮಯ್ಯ ಅವರ ಮುಖವಾಡ ಈಗ ಕಳಚಿ ಬಿದ್ದಿದೆ. ಒಂದಲ್ಲ, ಮೂರು ಪ್ರಕರಣಗಳು ಭ್ರಷ್ಟಾಚಾರ ಬಯಲಾಗಿವೆ. ಅಷ್ಟೇ ಅಲ್ಲ ಹೈಕೋರ್ಟ್, ಅಧೀನ ನ್ಯಾಯಾಲಯಗಳಿಂದ ಛೀಮಾರಿ ಕೇಳಿಬಂದಿವೆ. ತನಿಖೆಗೂ ಆದೇಶಿಸಿರುವ ಕಾರಣ ಅವರೀಗ ಅಪರಾಧಿ ಎಂದು ಸಿಎಂ ವಿರುದ್ಧವು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ರಾಜಿರಹಿತ ಹೋರಾಟ

"ಸ್ವತಃ ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕಾರಣ ಸಿಎಂ ಸಿದ್ದರಾಮಯ್ಯ ರಕ್ಷಣೆಗೆ ನಿಂತಿದೆ. ವಿದೇಶ ಪ್ರವಾಸದಲ್ಲಿ ಭಾರತೀಯರಿಗೆ ನೈತಿಕತೆ, ಪಾರದರ್ಶಕತೆ‌ ಬಗ್ಗೆ ರಾಹುಲ್ ಗಾಂಧಿ ಪಾಠ ಹೇಳುತ್ತಾರೆ. ರಾಜ್ಯದ ಸಿಎಂ ಸಿದ್ದರಾಮಯ್ಯ ವಿಷಯಕ್ಕೆ ಬಂದಾಗ ಮೌನ ವಹಿಸುತ್ತಾರೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣವು ಸಿಎಂ ಸಿದ್ದರಾಮಯ್ಯ ಮೂಗಿನ ನೇರಕ್ಕೆ ನಡೆದಿದೆ. ಮುಡಾ ಅಕ್ರಮದಲ್ಲಿ ಅವರದೂ ಪ್ರಭಾವವಿದೆ. ಟರ್ಫ್ ಕ್ಲಬ್​ಗೆ ತಮ್ಮ ಸ್ನೇಹಿತ ವಿವೇಕಾನಂದ ಅವರನ್ನು ಸ್ಟೀವರ್ಡ್ (ಸದಸ್ಯ) ಮಾಡಲು 1.30 ಕೋಟಿ ರೂ. ಚೆಕ್ ಮುಖೇನ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಎರಡು ಬಾರಿ ಬಿ ರಿಪೋರ್ಟ್ ಅನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದೆ" ಎಂದರು.

"ಮೂರು ಪ್ರಕರಣಗಳು ಭ್ರಷ್ಟಾಚಾರಕ್ಕೆ ಕೈಗನ್ನಡಿಯಾಗಿದ್ದು,‌ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು. ಬಿಜೆಪಿಯ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜಿರಹಿತ ಹೋರಾಟ ಮುಂದುವರಿಯಲಿದೆ. ಪಕ್ಷದ ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ" ಎಂದು ಶೋಭಾ ಕರಂದ್ಲಾಜೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net