

ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ವ್ಯಾಪ್ತಿ ಸೇರಿರುವ ಸರ್ಕಾರಿ ನೌಕರರನ್ನು ಹಳೇ ಪಿಂಚಣಿ ಯೋಜನೆ (ಒಪಿಎಸ್) ವ್ಯಾಪ್ತಿಗೆ ಒಳಪಡಿಸಬೇಕೆಂಬ ಹೋರಾಟ ಕಿಚ್ಚು ಹತ್ತಿಸಿರುವ ನಡುವೆಯೇ ಸರ್ಕಾರಿ ಸಿಬ್ಬಂದಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಎನ್ಪಿಎಸ್ನಿಂದ ಒಪಿಎಸ್ ವ್ಯಾಪ್ತಿಗೆ ಬಂದಿರುವ 13500 ನೌಕರರಿಗೆ ಒಪಿಎಸ್ ಸೌಲಭ್ಯ ಪಡೆಯಲು ಸರ್ಕಾರ ಕೊನೆಗೂ ಹಸಿರುನಿಶಾನೆ ತೋರಿದೆ. ಇದಿಷ್ಟೇ ಅಲ್ಲ, 50 ವರ್ಷ ಮೀರದ ಎಲ್ಲ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ 7ನೇ ವೇತನ ಶ್ರೇಣಿಗೆ ಅನುಗುಣವಾಗಿ ಕನಿಷ್ಠ ವಿಮಾ ಕಂತನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಕಡ್ಡಾಯವಾಗಿ ವಿಮಾ ಕಂತನ್ನು ಅಪ್ಡೇಟ್ ಮಾಡಲು ಗಡುವು ಕೊಟ್ಟಿದೆ.
2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ ನಂತರ ನೇಮಕಗೊಂಡಿರುವ 13500 ನೌಕರರನ್ನು ಎನ್ಪಿಎಸ್ನಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಿಸಿ 2024ರ ಜ.1ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಮೇಲೆ ರಾಜ್ಯ ಸರ್ಕಾರ ಒಪಿಎಸ್ಗೆ ಒಳಪಡಿಸಿತ್ತು. ಆದರೆ, 2006ಕ್ಕಿಂತ ಮುಂಚೆ ನೇಮಕಗೊಂಡಿರುವ 2.45 ಲಕ್ಷ ನೌಕರರು ರಾಜ್ಯದಲ್ಲಿದ್ದು, ಅವರೆಲ್ಲರನ್ನೂ ಎನ್ಪಿಎಸ್ನಿಂದ ಹಳೇ ಪಿಂಚಣಿ ವ್ಯವಸ್ಥೆ ವ್ಯಾಪ್ತಿಗೆ ಒಳಪಡಿಸಬೇಕೆಂದು ಸರ್ಕಾರಿ ನೌಕರರ ಹೋರಾಟ ಈಗಲೂ ಮುಂದುವರಿದಿದೆ.
ಸುಪ್ರೀಂಕೋರ್ಟ್ ಹಾಗೂ ಕೇಂದ್ರದ ಸೂಚನೆಯಂತೆ 13,500 ಸರ್ಕಾರಿ ನೌಕರರನ್ನು ಎನ್ಪಿಎಸ್ನಿಂದ ಒಪಿಎಸ್ಗೆ ಒಳಪಡಿಸಿ ಸರ್ಕಾರ ಆದೇಶಿಸಿದೆ. ಇವರ ವೇತನದಿಂದ ಕಡಿತಗೊಂಡಿದ್ದ ಎನ್ಪಿಎಸ್ ಮೊತ್ತ ಹಿಂಪಡೆಯಲು ಈಗ ಸರ್ಕಾರ ಅವಕಾಶ ಕಲ್ಪಿಸಿದೆ. | ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ ಫೆ.7ರಂದು ಬೆಂಗಳೂರಿನಲ್ಲಿ 30 ಸಾವಿರ ನೌಕರರೊಂದಿಗೆ ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಯಿತು. ಈಗ ಮಾ.2ಕ್ಕೆ ಟ್ವಿಟರ್ (ಎಕ್ಸ್) ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಭರವಸೆ ಕೊಟ್ಟಿರುವಂತೆ ರಾಜ್ಯದಲ್ಲಿ ಇಡೀ ಎನ್ಪಿಎಸ್ ಯೋಜನೆಯನ್ನೇ ರದ್ದುಗೊಳಿಸಬೇಕು. | ಶಾಂತರಾಮ ಅಧ್ಯಕ್ಷ, ಎನ್ಪಿಎಸ್ ನೌಕರರ ಸಂಘ
ಈ ಮಧ್ಯೆ ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿರುವವರಿಗೆ ಒಪಿಎಸ್ ಸೌಲಭ್ಯ ಪಡೆಯುವ ಜತೆಗೆ ಎನ್ಪಿಎಸ್ ಅನ್ವಯ 2006ರಿಂದ 2024ರವರೆಗೆ ಕಡಿತಗೊಂಡಿರುವ ಶೇ.10 ಹಣವನ್ನು ತಮ್ಮ ಖಾತೆಯಿಂದ ಹಿಂಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಸರ್ಕಾರ ಇದಕ್ಕೆ ಶೇ.14 ಹಣವನ್ನು ಸೇರಿಸಿ ನೌಕರನ ಖಾತೆಗೆ ಹಾಕಲಿದೆ. ಈಗ ಒಪಿಎಸ್ ವ್ಯಾಪ್ತಿಗೆ ಹಿಂದಿರುಗಿರುವ 13500 ನೌಕರರಿಗೆ ತಮ್ಮ ಪ್ರಾನ್ ಖಾತೆಯಲ್ಲಿರುವ ಹಣ ಹಾಗೂ ಸರ್ಕಾರದ ವಂತಿಗೆಯನ್ನು ಹಿಂಪಡೆಯಲು ಅವಕಾಶ ಕೊಡಲಾಗಿದೆ. ಪ್ರಾನ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರಿಗಳ ಜವಾಬ್ದಾರಿ ಏನೆಂದು ಸುದೀರ್ಘವಾದ ಆದೇಶ ಹೊರಡಿಸಿದೆ.
ಸೇವೆಯಲ್ಲಿರುವ, ನಿವೃತ್ತಿ ಹೊಂದಿರುವ ಹಾಗೂ ಮೃತಪಟ್ಟಿರುವ ಸರ್ಕಾರಿ ಅಧಿಕಾರಿ ಹಾಗೂ ನೌಕರರ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.
50 ವರ್ಷ ಮೀರದ ನೌಕರರಿಗೆ ವಿಮೆ ಕಡ್ಡಾಯ ಮಾಡಲಾಗಿದೆ. ಸರಾಸರಿ ವೇತನ ಶ್ರೇಣಿಯಲ್ಲಿ ಕನಿಷ್ಠ ಶೇ.6.25 ಮಾಸಿಕ ವಿಮಾ ಕಂತು ಕಟಾವಣೆ ಆಗುತ್ತಿತ್ತು. 7ನೇ ವೇತನ ಆಯೋಗದ ಶಿಫಾರಸಿನಂತೆ ಜುಲೈನಿಂದ ಪೂರ್ವಾನ್ವಯವಾಗುವಂತೆ ನೌಕರರ ವೇತನ ಶೇ.10 ಹೆಚ್ಚಳವಾಗಿದೆ. ಹೊಸ ವೇತನಕ್ಕೆ ಅನುಗುಣವಾಗಿ ವಿಮಾ ಮೊತ್ತ ಹೆಚ್ಚಿಸಬೇಕು. ಅದರಂತೆ 27000-46675 ವೇತನ ಶ್ರೇಣಿ ಹೊಂದಿರುವವರು ಕನಿಷ್ಠ ವಿಮಾ ಕಂತು 2300 ರೂ. ಇರಬೇಕು. 29600 - 52800 ವೇತನ ಶ್ರೇಣಿ ಇರುವವರ ವಿಮಾ ಕಂತು 2580 ರೂ. ಇರಬೇಕು. ಹೀಗೆ ಆಯಾ ಶ್ರೇಣಿಗೆ ತಕ್ಕಂತೆ ಹೆಚ್ಚಿಸಲಾಗಿದೆ. ಎಲ್ಲರೂ ವಿಮಾ ಕಂತನ್ನು ಕಡ್ಡಾಯವಾಗಿ ಹೆಚ್ಚಿಸಿಕೊಳ್ಳಬೇಕು ಎಂದು ಸರ್ಕಾರ ಫೆ.28ರ ಗಡುವು ಕೊಟ್ಟಿದೆ.
ಎನ್ಪಿಎಸ್ ರದ್ದಾಗುವವರೆಗೆ ಹೋರಾಟ ನಿಲ್ಲಲ್ಲ, ಎನ್ಪಿಎಸ್ ರದ್ದುಪಡಿಸುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದೆ. ಸಾಧಕ-ಬಾಧಕ ಅಧ್ಯಯನಕ್ಕೆ ಸಮಿತಿ ರಚಿಸಿದೆ. ಆದರೆ, ಸಮಿತಿ ರಚನೆ ಮಾಡಿದ್ದ ಕೇರಳ, ಆಂಧ್ರಪ್ರದೇಶ ಸೇರಿ ಯಾವ ರಾಜ್ಯಗಳಲ್ಲೂ ಸಮಿತಿ ಪರಿಹಾರ ಕೊಟ್ಟಿಲ್ಲ. ರಾಜಸ್ಥಾನ, ಚತ್ತೀಸ್ಘಡ, ಹಿಮಾಚಲಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಎನ್ಪಿಎಸ್ ರದ್ದಾಗಿದೆ. ಅದರಂತೆ ಕರ್ನಾಟಕದಲ್ಲೂ ರದ್ದಾಗಬೇಕು ಎಂದು ಎನ್ಪಿಎಸ್ ನೌಕರರ ಸಂಘ ಒತ್ತಾಯಿಸಿದೆ.