ಗುಂಡಿಬೈಲು ಶಿವಾಲಯದಲ್ಲಿ ಶಿವರಾತ್ರಿ ಆಚರಣೆ

kgl g
ಮರು ಪ್ರತಿಷ್ಠಾಪನೆ ನಂತರದ ಶ್ವೇತವರ್ಣದ ಶಿವಲಿಂಗ.
Published on

ಕಾರ್ಗಲ್: ಶರಾವತಿ ಕಣಿವೆಯ ತಳಕಳಲೆ ಅಣೆಕಟ್ಟಿನ ಹಿನ್ನೀರಿನ ನದಿ ದಂಡೆಯ ಗುಂಡಿಬೈಲು ಗ್ರಾಮದಲ್ಲಿ ನೆಲೆಗೊಂಡಿರುವ ಶ್ವೇತವರ್ಣದ (ಬಿಳಿಶಿವಲಿಂಗ) ಶಿವಲಿಂಗವಿರುವ ಶಿವಾಲಯ ಮಹಾಶಿವರಾತ್ರಿಗೆ ಸಜ್ಜಾಗುತ್ತಿದೆ.

ಶ್ವೇತವರ್ಣದ ಶಿವಲಿಂಗವು ನಾಲ್ಕು ಅಡಿ ಎತ್ತರವಾಗಿದ್ದು, ಮೇಲ್ಭಾಗದ ಒಂದು ಅಡಿ ಮಾತ್ರ ಲಿಂಗ ಕಾಣಿಸುವಂತೆ ಪ್ರತಿಷ್ಠಾಪಿಸಲಾಗಿದೆ. ಪುರಾತನ ಕಾಲದ ವಿಶಿಷ್ಟವಾದ ಶಿವಲಿಂಗದ ಬಹುಪಾಲು ಭಾಗ ಭೂಮಿಯಲ್ಲಿದೆ.

ಮರಾಠಿಕೇರಿಯ ಶಿವಾಲಯದಲ್ಲಿ ಮಹಾ ಅನ್ನಸಂತರ್ಪಣೆ ನೆರವೇರುತ್ತದೆ. ನೂರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರೆ, ಉಪವಾಸ ಆಚರಿಸುವವರಿಗೆ ಪ್ರತ್ಯೇಕವಾಗಿ ಉಪಾಹಾರ ವ್ಯವಸ್ಥೆ ಮಾಡಲಾಗುತ್ತದೆ. ಪಂಚಲಿಂಗೇಶ್ವರ ಸ್ವಾಮಿ ತಾಣದಲ್ಲಿ ೆ.25 ಹಾಗೂ 26ರಂದು ಜಾಗರಣೆ ಹಮ್ಮಿಕೊಳ್ಳಲಾಗಿದೆ. 25ರಂದು ಬೆಳಗ್ಗೆ ಗಣಪತಿ ಪೂಜೆ, ಪಂಚಗವ್ಯ ಹವನ, ಪುಣ್ಯಾಹ, ಕಲಾವೃದ್ಧಿ ಹವನ, ಬಲಿ ಉತ್ಸವ, ರಂಗಪೂಜೆ, ರಾಜೋಪಚಾರ ವಿಧಿ ವಿಧಾನಗಳು ನೆರವೇರಲಿವೆ. 26ರಂದು ರುದ್ರಹವನ, ಪರಿವಾರ ದೇವತಾ ಹವನ, ಸರ್ವಾಲಂಕಾರ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಪಡೆದಿದ್ದ ಚನ್ನಾಬೈರಾದೇವಿ ತಾನು ಆಳ್ವಿಕೆ ನಡೆಸುತ್ತಿದ್ದ ಪ್ರಾಂತ್ಯದ ವ್ಯಾಪ್ತಿಯಲ್ಲಿ ಐದು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದಳು ಎಂಬುದಾಗಿ ಹಿರಿಯರು ತಿಳಿಸುತ್ತಾರೆ. ಇವುಗಳ ಪೈಕಿ ಗುಂಡಿಬೈಲು ಶ್ರೀ ಪಂಚಲಿಂಗೇಶ್ವರ ಶ್ವೇತವರ್ಣದ ಲಿಂಗವೂ ಇಂದು ಎನ್ನಲಾಗಿದೆ.

ತಳಕಳಲೆ ಅಣೆಕಟ್ಟಿನ ಹಿನ್ನೀರಿನಲ್ಲಿ ಪುರಾತನ ಕಾಲದ ಈ ಶಿವಲಿಂಗ ಮುಳುಗಡೆಯಾಯಿತು. ತದನಂತರ ಈ ಪ್ರದೇಶದಲ್ಲಿ ದಟ್ಟವಾದ ಕೆಂಜಿಗಾ ಮುಳ್ಳಿನ ಕಾಡಿನ ಪೊದೆಯೊಳಗೆ ಮೂಡಿದ ಶ್ವೇತವರ್ಣದ ಶಿವಲಿಂಗಕ್ಕೆ ಹಸುವೊಂದು ಪ್ರತಿನಿತ್ಯ ಹೋಗಿ ಹಾಲನ್ನು ನೀಡಿ ತದನಂತರ ಬಂದು ತನ್ನ ಕರುವಿಗೆ ಹಾಲನ್ನು ನೀಡುತ್ತಿತ್ತು. ಕೊನೆಗೆ ಹಸು ಎಲ್ಲಿಗೆ ಹೋಗುತ್ತಿದೆ ಎನ್ನುವುದನ್ನು ಪತ್ತೆಹಚ್ಚಿದ ಗ್ರಾಮಸ್ಥರಿಗೆ ಉದ್ಘವಿಸಿದ ಲಿಂಗವನ್ನು ಕಂಡು ಭಕ್ತಿಯಿಂದ ಪೂಜಿಸಲು ಆರಂಭಿಸುತ್ತಾರೆ. ನಂತರ ಇಲ್ಲಿ ನೆಲೆ ನಿಂತ ಕುಣಬಿ ಮರಾಠಿ ಸಮುದಾಯದವರು 1963ರಲ್ಲಿ ಮುಳುಗಡೆಯಾದ ಶಿವಲಿಂಗವನ್ನು ನೀರಿನಿಂದ ಮೇಲೆ ತಂದು ಪೂಜಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ಶರಾವತಿ ನದಿ ದಂಡೆಯ ಮೇಲೆ ಪುಟ್ಟ ಗುಡಿ ನಿರ್ಮಿಸಿದ್ದರು. 2024ರಲ್ಲಿ ಸುಂದರವಾದ ಶಿವಾಲಯ ನಿರ್ಮಿಸಿ ಶ್ವೇತವರ್ಣದ ಪಂಚಲಿಂಗೇಶ್ವರವನ್ನು ಮರು ಪ್ರತಿಷ್ಠಾಪನೆ ಮಾಡಿ ಆರಾಧಿಸುತ್ತಿದ್ದಾರೆ.

ಈ ಕ್ಷೇತ್ರವು ಜೋಗದ ಶರಾವತಿ ವಿದ್ಯುದಾಗರದಿಂದ 15 ಕಿ.ಮೀ ದೂರದಲ್ಲಿದೆ. ಭದ್ರತೆ ದೃಷ್ಟಿಯಿಂದ ಕೆಪಿಸಿ ಭದ್ರತಾ ಗೇಟ್ ಅಳವಡಿಸಿದೆ. ಭಕ್ತರು ತಮ್ಮ ಮಾಹಿತಿ ನೀಡಿ ಚೀಟಿ ಪಡೆದು ದೇಗುಲಕ್ಕೆ ತೆರಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net