ಎಸ್​. ಎಂ. ಕೃಷ್ಣ ಅವರು ಮಾಡಿದ ಸಹಾಯವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವಂತಿಲ್ಲ: Shivarajkumar

Shivarajkumar
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮುತ್ಸದಿ ರಾಜಕಾರಣಿ ಎಸ್​. ಎಂ. ಕೃಷ್ಣ (SM Krishna) ಇಹಲೋಕ ತ್ಯಜಿಸಿದ್ದು, ಹುಟ್ಟೂರು ಸೋಮನಹಳ್ಳಿಯಲ್ಲಿ ನಾಳೆ (ಡಿಸೆಂಬರ್​ 11) ಅಂತ್ಯಕ್ರಿಯೆ ನಡೆಯಲಿದೆ. ಎಸ್​. ಎಂ. ಕೃಷ್ಣ ಅವರ ನಿಧನಕ್ಕೆ ರಾಜಕೀಯ, ಸಿನಿಮಾ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದು, ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ಎಸ್​. ಎಂ. ಕೃಷ್ಣ ಹಾಗೂ ಡಾ. ರಾಜ್​ಕುಮಾರ್​ ಅವರ ಕುಟುಂದ ಜೊತೆಗಿದ್ದ ಒಡನಾಟವನ್ನು ನಟ ಶಿವರಾಜ್​ಕುಮಾರ್​ (Shivarajkumar) ನೆನೆಪಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ.

ಸದಾಶಿವನಗರದಲ್ಲಿರುವ ಎಸ್​. ಎಂ. ಕೃಷ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಶಿವರಾಜ್​ಕುಮಾರ್​ (Shivarajkumar), ನಮ್ಮ ತಂದೆಯವರು ಎಸ್​. ಎಂ. ಕೃಷ್ಣ ಅವರನ್ನು ತುಂಬಾ ಗೌರವಿಸುತ್ತಿದ್ದರು. ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು ಒಬ್ಬ ಸೊಫೆಸ್ಟಿಕೇಟೆಡ್ ವ್ಯಕ್ತಿಯೆಂದರೆ ಅದು ಎಸ್​.ಎಂ. ಕೃಷ್ಣ (SM Krishna) ರೀತಿ ಇರಬೇಕು ಎಂದು ಹೇಳುತ್ತಿದ್ದರು.

ಶಿಸ್ತಿನ ವ್ಯಕ್ತಿತ್ವ ಅವರದ್ದು. ಅಂತಹಾ ವ್ಯಕ್ತಿಗಳು ಬಹಳ ಅಪರೂಪ. ವೈಯಕ್ತಿಕವಾಗಿಯೂ ನಮಗೆ ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವಿದೆ. ಅಪ್ಪಾಜಿ ಅವರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಕೃಷ್ಣ ಅವರು ಮಾಡಿದ ಸಹಾಯವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವಂತಿಲ್ಲ. ನಮ್ಮ ಕುಟುಂಬಕ್ಕೆ ಅತ್ಯಂತ ಆಪ್ತವಾಗಿದ್ದಾರೆ. ವಯಸ್ಸಾಗಿತ್ತು ಎಂದೆಲ್ಲ ಹೇಳುತ್ತಾರೆ ಆದರೆ ಅಗಲಿದ ನೋವು ಅದನ್ನು ಇಲ್ಲ ಎಂದು ಹೇಳಲಾಗುವುದಿಲ್ಲ. ನೋವು ಆಗಿಯೇ ಆಗುತ್ತದೆ ಎಂದು ನಟ ಡಾ. ಶಿವರಾಜ್​ಕುಮಾರ್​ (Shivarajkumar) ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

SM krishna Rajkumar

ಎಸ್​.ಎಂ. ಕೃಷ್ಣ (SM Krishna) ಅವರಿಗೆ 92 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಸಹ ಪಡೆದುಕೊಂಡಿದ್ದರು. ಚೇತರಿಸಿಕೊಳ್ಳದ ಹಿನ್ನೆಲೆ ಸದಾಶಿವ ನಗರದಲ್ಲಿರುವ ಅವರ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 2.30ರ ಹೊತ್ತಿಗೆ ವಿಧಿವಶರಾದರು ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.

ಕೃಷ್ಣ ಅವರು 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೆ, ರಾಜಕೀಯ ಜೀವನದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗಿ ಹಾಗೂ ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 2023ರಲ್ಲಿ ಎಸ್​.ಎಂ. ಕೃಷ್ಣ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net