

ಸಾಗರ: ಮಹಿಳೆಯರು ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿದ್ದು, ಮಾರುಕಟ್ಟೆ ನಿರ್ಮಿಸುವ ಕೆಲಸ ಬಹಳ ಮುಖ್ಯ. ಅವ್ವ ಸಂತೆಯು ಸ್ವಾವಲಂಬನೆ ಹಾಗೂ ಸಾಮಾಜಿಕ ಬದಲಾವಣೆ ತರುವಲ್ಲಿ ಒಳ್ಳೆಯ ಪ್ರಯತ್ನ ಎಂದು ಕಲಾವಿದೆ ಜ್ಯೋತಿ ಶಶಿಧರ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜೀವನ್ಮುಖಿ ಹಾಗೂ ಚರಕ ಸಂಸ್ಥೆ ಆಯೋಜಿಸಿದ್ದ ಅವ್ವ ಸಂತೆ, ಕರಕುಶಲ ಹಾಗೂ ಆಹಾರಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಸಾಮಾನ್ಯ ಮಹಿಳೆಯು ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನ ಕಾಣುತ್ತದೆ. ಆಹಾರ ಪದಾರ್ಥ, ಉಡುಪು, ಕರಕುಶಲ ವಸ್ತು ಮಾರಾಟ ಸೇರಿ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನರ ಆಕರ್ಷಿಸಿದ ಸಾವಯವ ಪದಾರ್ಥಗಳು
ಹಲಸಿನ ಹಣ್ಣಿನ ಕಪ್ ಕೇಕ್, ತೊಡೆದೇವು, ಹಲಸಿನ ಚಿಪ್ಸ್, ಹಲಸಿನ ಹಪ್ಪಳ, ವಿವಿಧ ಉಪ್ಪಿನಕಾಯಿ, ಮರಗೆಣಸಿನ ಕೀರ್, ಸುಕೇಳಿ, ಅಂಜೂರ್ ಬರ್ಫಿ ಮತ್ತು ಅಂಜೂರ್ ರೋಲ್, ಪತ್ರೊಡೆ, ಅತ್ತಿರಸ, ಹಲಸಿನ ಎಲೆ ಕಡುಬು, ಬಾಳೆಎಲೆ ಕೊಟ್ಟೆ ಕಡುಬು, ಟೆರ್ರಕೋಟ ರಾಖಿ, ಬಾಳೆದಿಂಡಿನ ಕೋಸಂಬರಿ, ಮಣ್ಣಿನ ಆಭರಣ, ಚರಕದ ಬಟ್ಟೆಗಳು ಪ್ರಮುಖವಾಗಿ ಗಮನ ಸೆಳೆದವು. ಶಿರಸಿ, ಸಿದ್ದಾಪುರ , ವಿಜಯಪುರ, ಯಲ್ಲಾಪುರ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ ಮಹಿಳೆಯರು ಆಗಮಿಸಿ ಅವ್ವ ಸಂತೆಯಲ್ಲಿ ಪಾಲ್ಗೊಂಡಿದ್ದರು. ಸಾವಯವ ಕೃಷಿಯ 50ಕ್ಕೂ ಹೆಚ್ಚು ಸಾವಯವ ಪದಾರ್ಥಗಳು ಜನರನ್ನು ಆಕರ್ಷಿಸಿತು.
ಉದ್ಯೋಗದ ಅವಕಾಶ ಸುಲಭವಾಗಿ ದೊರೆಯುವುದಿಲ್ಲ. ಮನೆಯಲ್ಲಿ ಕುಳಿತಿರುವ ಮಹಿಳೆಯರಿಗೆ ಇಂತಹ ವೇದಿಕೆಗಳು ಪ್ರತಿಭೆ ಪರಿಚಯಿಸಲು ಅವಕಾಶ ನೀಡುತ್ತವೆ. ಹೆಚ್ಚಾಗಿ ಬ್ರಾೃಂಡ್ ಉತ್ಪನ್ನಗಳು ಹುಡುಕುವ ಬದಲು ಸಾಂಪ್ರದಾಯಿಕ, ದೇಸಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಜೀವನ್ಮುಖಿ ಸದಸ್ಯೆಯರು ಗಾಯನ ಪ್ರಸ್ತುತ ಪಡಿಸಿದರು. ಜೀವನ್ಮುಖಿಯ ಎಂ.ವಿ.ಪ್ರತಿಭಾ, ಎಚ್.ಎಸ್.ರೋಹಿಣಿ, ಮಮತಾ ಜೈನ್, ಎಸ್.ಸೌಮ್ಯಾ, ವಿಕಾಸ್, ಚೂಡಾಮಣಿ ರಾಮಚಂದ್ರ, ಚರಕ ಸಂಸ್ಥೆಯ ಪದ್ಮಶ್ರೀ, ಮಹಾಲಕ್ಷ್ಮೀ ಇತರರಿದ್ದರು.