

ಹೊಸನಗರ: ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸದಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಿಟ್ಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸಮಾಜದ ಕೈಗನ್ನಡಿಯಾಗಬೇಕು. ಊರಿನ ಮೂಲಸೌಲಭ್ಯಗಳ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಾಧಕ ಪತ್ರಕರ್ತರನ್ನು ಶಾಸಕ ಆರಗ ಜ್ಞಾನೇಂದ್ರ ಸನ್ಮಾನಿಸಿ ಮಾತನಾಡಿ, ಹಿಂದೆ ದಿನಪತ್ರಿಕೆಗಳಲ್ಲಿ ಬರುವ ಹಲವು ವರದಿಗಳಿಗೆ ಓದುಗರು ಕಾಯುತ್ತಿದ್ದ ಕಾಲವೊಂದಿತ್ತು. ಪತ್ರಿಕೆಗಳು ಮೌಲ್ಯಾಧಾರಿತ ವರದಿಯಿಂದ ಓದುಗರನ್ನು ಆಕರ್ಷಿಸುವಂತಾಗಬೇಕು. ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಂತಹ ವರದಿಯನ್ನು ಪ್ರಕಟಿಸಬೇಕು ಎಂದರು.
ಹಿರಿಯ ಪತ್ರಕರ್ತ ನಾಗೇಶ್ ಎಸ್.ನಾಯಕ್, ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ ಹಾಗೂ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯಕ್ಷಪಲ್ಲವಿ ಟ್ರಸ್ಟ್ ಮಾಳಕೋಡ ಅವರಿಂದ ಯಕ್ಷ-ಗಾನ-ನೃತ್ಯ-ವೈಭವ ನಡೆಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಉಪಾಧ್ಯಕ್ಷ ವೈದ್ಯ, ಆರ್.ಎಸ್.ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಉದ್ಯಮಿ ಹಾಲಗದ್ದೆ ಉಮೇಶ್, ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ನಿಟ್ಟೂರು ಗ್ರಾಪಂ ಅಧ್ಯಕ್ಷೆ ಚಂದ್ರಮತಿ, ನಾಗರಕೊಡಿಗೆ ರವಿ, ಅಶ್ವಿನಿ ಪಂಡಿತ್ ಮತ್ತಿತರರಿದ್ದರು.