

ಸಾಗರ: ಕಲಾವಿದರು ದೇಶದ ಆಸ್ತಿ. ಕಲಾ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಕಲಾವಿದರ ಪಾತ್ರ ಮಹತ್ತರ. ರಾಜ್ಯ ಸರ್ಕಾರ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಮತ್ತೂರು-ಹೊಸಹಳ್ಳಿಯ ಸಂಕೇತಿ ಸಂಗೀತ ಸಭಾದಿಂದ ಪದ್ಮಭೂಷಣ ಲಾಲ್ಗುಡಿ ಜಿ.ಜಯರಾಮನ್ ಅವರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಲಾಲ್ಗುಡಿ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ಸಂಗೀತವು ಸಂಸ್ಕಾರ ಕಲಿಸುವ ಜತೆಗೆ ಮಾನಸಿಕ ಸದೃಢತೆ ತಂದು ಕೊಡುತ್ತದೆ. ವಿದ್ವಾನ್ ಲಾಲ್ಗುಡಿ ಜಯರಾಮನ್ ಸಂಗೀತ ಜ್ಞಾನದ ಮೂಲಕ ದೊಡ್ಡಮಟ್ಟದ ಶಿಷ್ಯವೃಂದ ಹೊಂದಿದ್ದಾರೆ. ಅವರಿಗೆ ಅದ್ಭುತವಾಗಿ ವಯೋಲಿನ್ ನುಡಿಸುವ ಕಲೆ ಕರಗತವಾಗಿತ್ತು. ಸಂಕೇತಿ ಸಂಗೀತ ಸಭಾ 25 ವರ್ಷಗಳಿಂದ ಸಂಗೀತ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಮಹಾಸಭಾ ಅಧ್ಯಕ್ಷ ವಿದ್ವಾನ್ ವೆಂಕಟರಾವ್ ಮಾತನಾಡಿ, ಸಂಕೇತಿ ಸಂಗೀತಾ ಸಭಾದಿಂದ ಸಂಗೀತ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ರೀತಿ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಲಾಲ್ಗುಡಿ ಡೇ ಕಾರ್ಯಕ್ರಮ ಬೇರೆಬೇರೆ ಸ್ಥಳಗಳಲ್ಲಿ ನಡೆಸಲು ಉದ್ದೇಶಿಸಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಪ್ರಮುಖರಾದ ಅಶ್ವಿನಿಕುಮಾರ್, ಐ.ವಿ.ಹೆಗಡೆ, ವಸುಧಾ ಶರ್ಮ. ಮಾಧವ ಭಟ್, ಮ.ಸ.ನಂಜುಂಡಸ್ವಾಮಿ. ಎಚ್.ಎಸ್.ವೆಂಕಟೇಶ್, ಎಂ.ಎಸ್.ಮಾನಸಾ ಇತರರಿದ್ದರು.