

ಹೊಳೆಹೊನ್ನೂರು: ಪಟ್ಟಣದ ಶಕ್ತಿ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.
ರಥೋತ್ಸವ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಅನೇಕ ಪುಷ್ಪಗಳನ್ನು ತರಿಸಲಾಗಿತ್ತು. ರಥಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ ಶ್ರೀ ಅಮ್ಮನವರ ಶಿಲಾಮೂರ್ತಿಗೆ ಪುಣ್ಯ ತೀರ್ಥ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಮಾಡಲಾಯಿತು.
ಗ್ರಾಮದ ಮಹಿಳೆಯರು ಅಮ್ಮನವರ ದೇವಸ್ಥಾನಕ್ಕೆ ಬಂದು ಮಡಿಲಕ್ಕಿ, ಸೀರೆ, ಕುಪ್ಪುಸ ಕೊಟ್ಟು ಹಣ್ಣು ಕಾಯಿ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಯನ್ನು ಮಡಿ ವಸ, ಹೂಗಳಿಂದ ಸಿಂಗರಿಸಿದ ಅಡ್ಡಪಲ್ಲಕ್ಕಿಯೊಂದಿಗೆ ಡೋಲು, ಭಜಂತ್ರಿ, ಸಿಡಿಮದ್ದಿನೊಂದಿಗೆ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಸಿಂಗಾರಗೊಂಡಿದ್ದ ಪುಷ್ಪಾಲಂಕೃತ ರಥದಲ್ಲಿ ಅಮ್ಮನವರನ್ನು ಕೂರಿಸಿ ಮಂಗಳಾರತಿ ಮಾಡಲಾಯಿತು.
ಭಕ್ತರು ರಥ ಎಳೆದು ಸಂಭ್ರಮಿಸಿದರು. ರಥದಲ್ಲಿ ಕುಳಿತ ಶ್ರೀ ಅಮ್ಮನವರನ್ನು ಭಕ್ತರು ಕಣ್ತುಂಬಿಕೊಂಡರು. ರಥೋತ್ಸವಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ನೂರಾರು ಜನರು ಆಗಮಿಸಿದ್ದರು. ರಥೋತ್ಸವದ ಅಂಗವಾಗಿ ದೇವಸ್ಥಾನ, ಮಹಾದ್ವಾರದ ಗೋಪುರ ಹಾಗೂ ದೇವಸ್ಥಾನದ ರಸ್ತೆಗೆ ಆಕರ್ಷಕ ವಿದ್ಯುತ್ ಅಲಂಕಾರ ಭಕ್ತರ ಮನಸೂರೆಗೊಂಡಿತು.