

ರಿಪ್ಪನ್ಪೇಟೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ದೀವರು ಎಂದೇ ನಮೂದಿಸಬೇಕು ಎಂದು ಉಪನ್ಯಾಸಕ ಮೋಹನ್ ಚಂದ್ರಗುತ್ತಿ ಹೇಳಿದರು.
ಪಟ್ಟಣದಲ್ಲಿ ಹಳೇಪೈಕ ದೀವರ ಬಳಗ, ದೀವರ ಯುವ ವೇದಿಕೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ದೀವರ ದಿಕ್ಕು-ದೆಸೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ನಾವು ಮೂಲತಃ ದೀವರು, ಆಚಾರ, ವಿಚಾರ, ಭಾಷೆ, ಸಂಸ್ಕೃತಿ ಎಲ್ಲವೂ ನಮ್ಮ ಪೂರ್ವಜರ ಕೊಡುಗೆಗಳೇ ಆಗಿವೆ ಎಂದು ತಿಳಿಸಿದರು.
ನಾವು ನಮ್ಮ ಅಸ್ಮಿತೆ ಬಿಟ್ಟುಕೊಡಬಾರದು. ದೀವರು ಎಂದು ಬರೆಸುವುದರಿಂದ ಜನಾಂಗದ ನಿಖರ ಸಂಖ್ಯೆ ತಿಳಿಯಲಿದೆ. ಬಲಿಷ್ಠ ಸಮಾಜ ಎಂಬ ಹೆಗ್ಗಳಿಕೆ ಉಳಿಯುತ್ತದೆ. ಸರ್ಕಾರದ ಮೀಸಲಾತಿ ವ್ಯವಸ್ಥೆಯ ಹಿಂದುಳಿದ ವರ್ಗದ ಉಪಯೋಗದಲ್ಲಿ ಯಾವ ತೊಂದರೆ ಆಗುವುದಿಲ್ಲ ಎಂದರು.
ಸಾರಗನಜೆಡ್ಡು ಶ್ರೀ ಕಾರ್ತಿಕೇಯ ಪೀಠದ ಅವಧೂತ ಯೋಗೇಂದ್ರ ಸ್ವಾಮೀಜಿ ಮಾತನಾಡಿ, ದೀವರು ಒಗ್ಗೂಡುವ ಸಮಯ ಬಂದಿದೆ. ಬಲವಾದ ನೆಲೆ ಕಂಡುಕೊಂಡು ಬಲಿಷ್ಠ ಸಂಘಟನೆ ಆಗಬೇಕು. ಸಮೀಕ್ಷೆಯಲ್ಲಿ ದೀವರು ಎಂದು ಬರೆಯಿಸಿ ಸರ್ಕಾರಕ್ಕೆ ನಮ್ಮ ಶಕ್ತಿ ಪ್ರದರ್ಶನ ಆಗಬೇಕು ಎಂದು ತಿಳಿಸಿದರು.
ಸಿದ್ದಾಪುರದ ಎನ್.ಡಿ.ನಾಯ್ಕ, ಸುರೇಶ್ ಬಾಳೆಗುಂಡಿ, ಬಂಡಿ ರಾಮಚಂದ್ರ, ಎನ್.ಪಿ.ರಾಜು, ಸೋಮಶೇಖರ್ ಬಂಡಿ, ಅಣ್ಣಪ್ಪ ಮಳೀಮಠ, ನಾಗರಾಜ್ ನೇರಿಗೆ, ಹರ್ಷ ಕುಗ್ವೆ ಇತರರಿದ್ದರು.