

ಶಿವಮೊಗ್ಗ: ಕಾಂಗ್ರೆಸ್ ಈ ದೇಶದ ಹೆಮ್ಮೆ. ಬಡವರ ಕಲ್ಯಾಣ, ದೇಶದ ಅಭಿವೃದ್ಧಿಗೆ ಬಹುದೊಡ್ಡ ಯೋಜನೆಗಳನ್ನು ನೀಡಿದ ಕೀರ್ತಿ ನಮ್ಮ ಪಕ್ಷಕ್ಕಿದೆ ಎಂದು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಬುಧವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಎಲ್ಲಾ ಜಾತಿ, ವರ್ಗದವರನ್ನು ಸಮಾನವಾಗಿ ಕಾಣುತ್ತದೆ. ಸಮಾಜದಲ್ಲಿ ಸಮಾನತೆ, ಸಾಮರಸ್ಯ ಭಾವನೆಗಳನ್ನು ಬೆಳೆಸುತ್ತದೆ. ಇದು ಬಿಜೆಪಿಯಂತಹ ಪಕ್ಷದಿಂದ ಸಾಧ್ಯವಿಲ್ಲ ಎಂದರು.
ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಮತ್ತು ಅಗತ್ಯ. ಸ್ವಾತಂತ್ರೃಕ್ಕಾಗಿ ದುಡಿದ ಮತ್ತು ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಪಕ್ಷ ನಮ್ಮದು. ಕಾಂಗ್ರೆಸ್‌ನಿಂದ ಮಾತ್ರ ಬಡವರ ಕಲ್ಯಾಣ ಸಾಧ್ಯ. ಹಲವು ಕಾರಣಗಳಿಂದ ಇಂದು ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಜನರ ಮಿಡಿತ ಇನ್ನೂ ಕಾಂಗ್ರೆಸ್ ಪರವಾಗಿರುವುದರಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ದಿನಗಳು ದೂರಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತದಲ್ಲಿ ಹಿಂಸೆ ಹೆಚ್ಚುತ್ತಿದೆ. ಕೋಮುಗಳ ನಡುವೆ ವೈಮನಸ್ಯ ಬೆಳೆಯುತ್ತಿದೆ. ಸಂವಿಧಾನವೇ ದಿಕ್ಕು ಕಾಣದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರ ಮನೋಭಾವ ಸೇರಿಕೊಂಡಿದೆ. ಕೋಮು ಗಲಭೆಗಳು ದೇಶದುದ್ದಕ್ಕೂ ನಡೆಯುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ವೈ.ಎಚ್.ನಾಗರಾಜ್, ಇಸ್ಮಾಯಿಲ್ ಖಾನ್. ಚಂದ್ರಭೂಪಾಲ, ಬಲದೇವಕೃಷ್ಣ, ವಿಶ್ವನಾಥ ಕಾಶಿ, ಜಿ.ಪಲ್ಲವಿ ಮುಂತಾದವರಿದ್ದರು.