

ಸೊರಬ: ಪ್ರತಿಯೊಬ್ಬ ವ್ಯಕ್ತಿ ಗುರುಭಕ್ತಿ, ಏಕನಿಷ್ಠೆ ಇದ್ದಾಗ ಸಾಧನೆ ಸುಲಭವಾಗುತ್ತದೆ. ಇದಕ್ಕೆ ಅಕ್ಕಮಹಾದೇವಿ ಮತ್ತು ಹನುಮಂತ ಸಾಕ್ಷಿ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಆಯೋಜಿಸಿದ್ದ 232ನೇ ಶಿವಾನುಭವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಆನವಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೆ.ಜಿ.ಕೀರ್ತಿ ಹಾಗೂ ಕಲಾ ವಿಭಾಗದ ವಿದ್ಯಾರ್ಥಿನಿ ಲಕ್ಷ್ಮಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಲೌಕಿಕ ಜೀವನಕ್ಕೆ ಬೇಸತ್ತ ಅಕ್ಕಮಹಾದೇವಿ ಅಂತರಾತ್ಮದಲ್ಲಿ ಚನ್ನಮಲ್ಲಿಕಾರ್ಜುನನ್ನು ಅರಸಿ ಅಲೌಕಿಕ ಪತಿಯಾಗಿ ಆಯ್ಕೆ ಮಾಡಿಕೊಂಡಿದ್ದು, ಹನುಮಂತ ಶ್ರೀ ರಾಮನನ್ನು ಆರಾಧ್ಯ ದೈವವಾಗಿ ನಂಬಿಕೆ ಹೊಂದಿದ್ದು ಇಂದಿನ ಸಮಾಜಕ್ಕೆ ನಿಷ್ಠೆ ಮತ್ತು ಭಕ್ತಿಗೆ ಮಾದರಿ ಎಂದು ತಿಳಿಸಿದರು.
ಸುಂದರ ಬದುಕು ಸಾಲ್ಯ ಪಡೆಯಬೇಕಾದರೆ ಗುರು ಭಕ್ತಿ ಮುಖ್ಯ. ಬದುಕಿನ ಸೂತ್ರಗಳು ಶರಣರ ವಚನಗಳಲ್ಲಿ ಅಡಕವಾಗಿವೆ. ಅಕ್ಕಮಹಾದೇವಿ ಅವರ ವಚನ ಸಂದೇಶವನ್ನು ಪಾಲಿಸುವ ಮೂಲಕ ಧಾರ್ಮಿಕ ಆಚರಣೆಗಳನ್ನು ಮೈಗೂಡಿಸಿಕೊಂಡು ನಡೆದರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂಂದರು.
ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಹಾಗೂ ರೇಖಾ ಜಗದೀಶ್ ಅವರು ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು. ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ಡಿ.ಶಿವಯೋಗಿ, ಶಂಕರ್ ಶೇಟ್, ಬಸವರಾಜ ಗೌಡ, ಜಯಮಾಲಾ, ಪುಷ್ಪಾ, ಉಷಾ ಇತರರಿದ್ದರು.