

ರಿಪ್ಪನ್‌ಪೇಟೆ: ಶಿಕ್ಷಣ ಜೀವನದ ಅತ್ಯಂತ ದೊಡ್ಡ ಶಕ್ತಿ. ವಿದ್ಯಾರ್ಥಿಗಳು ಜ್ಞಾನವೃದ್ಧಿಗೆ ಶಿಕ್ಷಣ ಕಲಿಕೆಯಲ್ಲಿ ಆಸಕ್ತಿ ಹೊಂದಬೇಕು ಎಂದು ಮುರುಘರಾಜೇಂದ್ರ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವರೆಡ್ ಕ್ರಾಸ್, ಯುವ ರೆಡ್ ರಿಬ್ಬನ್, ರೋವರ್ಸ್ ರೇಂಜರ್ಸ್ ಚಟುವಟಿಕೆಗಳ ಉದ್ಘಾಟನೆ, ಕೃಷಿ ಸಂರಕ್ಷಣೆ ಮರುಹುಟ್ಟು ಕೃತಿ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿಜ್ಞಾನಿ, ಸಾಹಿತಿ, ಉದ್ಯಮಿ ಆಗುತ್ತೇನೆ ಎನ್ನುವವರ ನಡುವೆ ಕೃಷಿಕ ಆಗುವವರ ಸಂಖ್ಯೆ ಕಡಿಮೆ. ಆದರೆ ಕೃಷಿಕರು ನಿಜವಾದ ಅನ್ನದಾತರು ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೃಷಿ ಕ್ಷೇತ್ರದ ಕಡೆಗಣನೆ ಸಲ್ಲದು ಎಂದು ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ವಿಧಾನಸಭಾ ಕ್ಷೇತ್ರದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ವಿರುಪಾಕ್ಷಪ್ಪ ರಚಿಸಿದ ಕೃಷಿ ಸಂರಕ್ಷಣೆ ಮರು ಓದು ಕೃತಿ ಬಿಡುಗಡೆಗೊಳಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಚಂದ್ರೇಶ್, ಆಸೀಫ್, ನಿರೂಪ್‌ಕುಮಾರ್, ಮಂಜುನಾಥ್ ಕಾಮತ್, ಹರ್ಷ, ಪಿಯೂಸ್ ರೋಡ್ರಿಗಸ್, ಶ್ರೀನಿವಾಸಚಾರ್, ವಿಜೇಂದ್ರ, ರಘು, ರವೀಂದ್ರ ಇತರರಿದ್ದರು.