ವಿದ್ಯಾರ್ಥಿಗಳಲ್ಲಿ ಇಲ್ಲ ಸೃಜನಶೀಲ ವ್ಯಕ್ತಿತ್ವ

3sgr1
ಸಾಗರ ತಾಲೂಕು ವಿದ್ಯಾರ್ಥಿ ಸಾಹಿತ್ಯ ವೇದಿಕೆಯನ್ನು ಹಿರಿಯ ಸಾಹಿತಿ ಡಾ. ಜಿ.ಎಸ್.ಭಟ್ ಉದ್ಘಾಟಿಸಿದರು. ಡಾ. ಸರ್ಫ್ರಾಜ್ ಚಂದ್ರಗುತ್ತಿ, ಎಂ.ವಿ.ಪ್ರತಿಭಾ, ಎಸ್.ಎಂ.ಗಣಪತಿ ಇದ್ದರು.
Published on

ಸಾಗರ: ವಿದ್ಯಾರ್ಥಿಗಳಲ್ಲಿ ಸೃಜನಶೀಲ ವ್ಯಕ್ತಿತ್ವ ಬೆಳೆಸುವಲ್ಲಿ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಸೋತಿದೆ. ಸಾಹಿತ್ಯ, ಸಾಂಸ್ಕೃತಿಕ ವೇದಿಕೆಗಳು ವ್ಯಕ್ತಿಯ ನಿಜ ವ್ಯಕ್ತಿತ್ವವನ್ನು ಅರಳಿಸಲು ನೆರವಾಗಬಲ್ಲವು ಎಂದು ಹಿರಿಯ ಸಾಹಿತಿ ಡಾ. ಜಿ.ಎಸ್.ಭಟ್ ಹೇಳಿದರು.

ಸಾಗರದ ಪರಸ್ಪರ ಸಾಹಿತ್ಯ ವೇದಿಕೆಯ ಅಂಗ ಸಂಸ್ಥೆ ಸಾಗರ ತಾಲೂಕು ವಿದ್ಯಾರ್ಥಿ ಸಾಹಿತ್ಯ ವೇದಿಕೆ ಉದ್ಘಾಟಿಸಿ ಮಾತನಾಡಿ, ಆಸಕ್ತಿ ಹೆಚ್ಚಿಸುವ ಕೃತಿಗಳನ್ನು ಮೊದಲು ವಿದ್ಯಾರ್ಥಿಗಳು ಓದಲು ಆರಂಭಿಸಬೇಕು. ನಂತರದಲ್ಲಿ ನಿಮಗೆ ಅವಶ್ಯವಿರುವ ಸಾಹಿತ್ಯ ಪ್ರಕಾರ ಆಯ್ಕೆ ಮಾಡಿಕೊಂಡು ಪ್ರಬುದ್ಧ ಸಾಹಿತ್ಯದತ್ತ ಮುಂದುವರಿಯಬೇಕು ಎಂದು ತಿಳಿಸಿದರು.

ಪರಸ್ಪರ ವೇದಿಕೆ ಅಧ್ಯಕ್ಷ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಹೊಸ ವಸ್ತು ವಿಚಾರಗಳನ್ನು ಪಠ್ಯಗಳಿಂದ ಮಾತ್ರ ನಿರೀಕ್ಷೆ ಮಾಡಲಾಗದು. ಸಾಹಿತ್ಯ ವೇದಿಕೆಗಳ ಮೂಲಕ ಕಲೆ, ಸಾಹಿತ್ಯ, ರಂಗಭೂಮಿ ಮೊದಲಾದ ವಿಷಯಗಳಲ್ಲಿ ಆಸಕ್ತಿ ಮೂಡಿಸುವುದು. ಹೊಸ ಕಾಲಕ್ಕೆ ಯುವ ಮನಸ್ಸುಗಳನ್ನು ಸಜ್ಜುಗೊಳಿಸುವುದು ವೇದಿಕೆ ಉದ್ದೇಶವಾಗಿದೆ. ಸ್ಥಳೀಯ ಹಾಗೂ ನಾಡಿನ ಹೆಸರಾಂತ ಲೇಖಕರು, ಚಿಂತಕರು, ಸಾಮಾಜಿಕ ಹೋರಾಟಗಾರರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಸ್ಪಂದನಾ ರಂಗ ತಂಡದ ಎಂ.ವಿ.ಪ್ರತಿಭಾ ಮಾತನಾಡಿ, ಅಕಾಡೆಮಿಕ್ ಹೊರತಾಗಿ ವಿದ್ಯಾರ್ಥಿಗಳನ್ನು ಬೆಳೆಸುವ ಅಗತ್ಯವಿದೆ. ಮೊಬೈಲ್ ಗುಂಗಿನಿಂದ ಹೊರಬಂದು ನಿಮ್ಮ ಅಭಿರುಚಿಯನ್ನು ಓದಿನತ್ತ ಬದಲಾಯಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿ ಸಮೂಹ ರಂಗಭೂಮಿಯತ್ತ ನಿರಾಸಕ್ತಿ ಬೆಳೆಸಿಕೊಂಡಿದೆ. ನಾಟಕ, ಸಾಹಿತ್ಯ ಓದುವ ಅಭಿರುಚಿ ಇಲ್ಲ. ಈ ಹಿನ್ನೆಲೆಯಲ್ಲಿ ಸಾಹಿತ್ಯ ವೇದಿಕೆ ಓಡನಾಟ ಉಪಯುಕ್ತ ಎಂದು ಅಭಿಪ್ರಾಯಪಟ್ಟರು.

ಡಾ. ಜಿ.ಎಸ್.ಭಟ್ ಅವರೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಕವನಾ, ಯಶವಂತ್, ವಿದ್ಯಾ, ಡಾ. ವ.ಮ.ಗಂಗಾಧರ, ಬಿ.ಆರ್.ಲಕ್ಷ್ಮೀನಾರಾಯಣ ಪಾಲ್ಗೊಂಡಿದ್ದರು. ಉಪನ್ಯಾಸಕ ವಿಶ್ವನಾಥ್, ಪರಸ್ಪರ ಕಾರ್ಯದರ್ಶಿ ಎಸ್.ಎಂ.ಗಣಪತಿ, ಪದವಿಪೂರ್ವ, ಪದವಿ ಹಾಗೂ ಬಿ.ಇಡಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net