ಶ್ರೀ ಮಲೇಶಂಕರ ದೇವರ ಅದ್ದೂರಿ ರಥೋತ್ಸವ

23 anr 2
ಆಯನೂರು ಸಮೀಪದ ಶ್ರೀ ಮಲೇಶಂಕರ ದೇವರ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ತೇರನ್ನು ಎಳೆದರು.
Published on

ಆಯನೂರು: ಸಮೀಪದ ದಟ್ಟ ಕಾಡಿನ ನಡುವೆ ಇರುವ ಪ್ರಸಿದ್ಧ ಶ್ರೀ ಮಲೇಶಂಕರ ದೇವರ ರಥೋತ್ಸವವು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಜನರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಭಕ್ತರ ಜಯಘೋಷಗಳು ಮುಗಿಲು ಮುಟ್ಟಿತು. ಜನರು ಬಾಳೆಹಣ್ಣುಗಳನ್ನು ತೇರಿನ ಕಳಸಕ್ಕೆ ಹೊಡೆದು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಗಣಪತಿ ಪೂಜೆ, ಪುಣ್ಯಾಹ, ನಂದಿಧ್ವಜಾರೋಹಣ, ರಾತ್ರಿ ಯಾಗಶಾಲಾ ಪ್ರವೇಶ, ಅಂಕುರಾರ್ಪಣೆ, ಕಂಕಣ ಬಂಧನ, ಭೇರಿತಾಡನ, ಬಲಿ ಪ್ರಾರಂಭೋತ್ಸವ ನಡೆಯಿತು. ದೇವರ ಸನ್ನಿಧಿಯಲ್ಲಿ ಕಲಾತತ್ವ ಹವನ ನಡೆದು ನಂತರ ಮಹಾರಥೋತ್ಸವ ನಡೆಯಿತು. ನಂತರ ಬಲಿ ಚೂರ್ಣೋತ್ಸವ, ಅವಭೃತ ಸ್ನಾನ, ಓಕುಳಿ, ಕುಂಕುಮೋತ್ಸವ, ಸಂಧಾನ, ಪೂರ್ಣಾಹುತಿ ಧಾರ್ಮಿಕ ಕಾರ್ಯಗಳು ವೇದಬ್ರಹ್ಮ ಶ್ರೀಧರ ಭಟ್ಟರ ಪೌರೋಹಿತ್ಯದಲ್ಲಿ ಜರುಗಿದವು. ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಮತ್ತು ಇತರ ಪುರೋಹಿತರು ಇದ್ದರು.

ರಥೋತ್ಸವಕ್ಕೆ ಬೆಂಗಳೂರು, ದಾವಣಗೆರೆ, ಹರಿಹರ, ಶಿವಮೊಗ್ಗ ಭದ್ರಾವತಿ, ಹೊನ್ನಾಳಿ, ಸುತ್ತಲಿನ ಗ್ರಾಮಗಳಾದ ಆಯನೂರು, ಕುಂಸಿ, ಚೋರಡಿ, ದ್ಯಾವಿನಕೆರೆ, ಮಂಡಘಟ್ಟ, ಚಿನ್ನಮನೆ, ಆಡಗಡಿ, ಕೋಟೆ, ಬೆನವಳ್ಳಿ, ಇಟ್ಟಿಗೆಹಳ್ಳಿ, ಸಿರಿಗೆರೆ, ಶೆಟ್ಟಿಕೆರೆ, ಪುರದಾಳು, ತಮ್ಮಡಿಹಳ್ಳಿ, ಹಾರನಹಳ್ಳಿಗಳಿಂದ ಜನರು ಬಂದಿದ್ದರು.

ಗ್ರಾಮಕ್ಕೆ ಬಸ್ ಸೌಕರ್ಯ ಇರದ ಕಾರಣ ಜನರಿಗೆ ಅನುಕೂಲವಾಗಲು ಗ್ರಾಮಸ್ಥರು ಎರಡು ಉಚಿತ ಬಸ್ ವ್ಯವಸ್ಥೆ ಮಾಡಿದ್ದರು. ಮಲೇಶಂಕರ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಕೋಟ್ಯಂತರ ರೂ. ಹಣ ಮಂಜೂರಾಗಿದೆ. ಕಲ್ಯಾಣಿ, ವಸತಿ ಸೌಕರ್ಯ, ಸಭಾಂಗಣ ಹೀಗೆ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net