ಸಂಸ್ಕೃತ ಭಾಷೆಗಿದೆ ವಿಶೇಷ ಸ್ಥಾನಮಾನ

15 Thyagarthi
ಹೆಗ್ಗೋಡಿನ ರೂಪಶ್ರೀ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂಸ್ಕೃತ ಕಾರ್ಯಾಗಾರವನ್ನು ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ ಉದ್ಘಾಟಿಸಿದರು. ಕೇಶವ ಸಂಪೆಕೈ, ದತ್ತಮೂರ್ತಿ ಭಟ್, ಎಂ.ಎಂ.ತಿಮ್ಮಪ್ಪ, ವಿ.ಜಿ.ಶ್ರೀಧರ ಇದ್ದರು.
Published on

ತ್ಯಾಗರ್ತಿ: ಪ್ರಾಚೀನ ಕಾಲದಿಂದಲೂ ಇರುವ ಸಂಸ್ಕೃತ ಭಾಷೆಗೆ ಭಾರತದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡುಪಲ್ಲಿ ಹೇಳಿದರು.

ಸಾಗರ ತಾಲೂಕಿನ ಹೆಗ್ಗೋಡಿನ ವಿಸಂ ವಿದ್ಯಾಸಂಸ್ಥೆಯ ರೂಪಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ, ಜಿಲ್ಲಾ ಸಂಸ್ಕೃತ ಉಪನ್ಯಾಸಕರ ವೇದಿಕೆಯಿಂದ ಆಯೋಜಿಸಿದ್ದ ಸಂಸ್ಕೃತ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಂಸ್ಕೃತ ಭಾಷೆಯನ್ನು ದೇವ ಭಾಷೆ ಎಂದು ಕರೆಯಲಾಗುತ್ತದೆ. ಅನೇಕ ಪುರಾಣ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಯುರೋಪಿಯನ್ ದೇಶಗಳಲ್ಲಿ ಪುರಾತನ ಗ್ರೀಕ್ ಮತ್ತು ಲ್ಯಾಟೀನ್ ಭಾಷೆಗೆ ಇರುವ ಸ್ಥಾನವನ್ನು ಭಾರತದಲ್ಲಿ ಸಂಸ್ಕೃತ ಭಾಷೆಗೆ ನೀಡಲಾಗಿದೆ. ಪುರಾತನ ಗ್ರಂಥಗಳ ಬಗ್ಗೆ ತಿಳಿಯಲು ನಾವು ಹೆಚ್ಚು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಸಂಸ್ಕೃತ ಉಪನ್ಯಾಸಕರ ವೇದಿಕೆ ಅಧ್ಯಕ್ಷ ದತ್ತಮೂರ್ತಿ ಭಟ್ ಮಾತನಾಡಿ, ಎಲ್ಲ ಭಾಷೆಯ ವ್ಯಾಕರಣದಲ್ಲಿ ಸಂಸ್ಕೃತ ಇದೆ. ಇತ್ತೀಚೆಗೆ ಸಂಸ್ಕೃತ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಹಿಂದೆ ಹತ್ತು ವಿದ್ಯಾರ್ಥಿಗಳು ಇದ್ದರೂ ಅಧ್ಯಯನಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ಕನಿಷ್ಠ 40 ವಿದ್ಯಾರ್ಥಿಗಳು ಇರಬೇಕು ಎಂಬ ನಿಯಮವಿದೆ ಎಂದರು.

ವಿದ್ಯಾರ್ಥಿಗಳ ಜತೆಗೆ ಉಪನ್ಯಾಸಕರೂ ಕಾಲಕಾಲಕ್ಕೆ ಪರಿವರ್ತನೆಗೆ ಹೊಂದಿಕೊಳ್ಳಬೇಕು. ಹೊಸ ವಿಷಯಗಳನ್ನು ತಿಳಿಯಲು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು. ವಿಷಯ ವಿನಿಮಯದಿಂದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದತ್ತಮೂರ್ತಿ ಭಟ್ ಜಿಲ್ಲಾ ಸಂಸ್ಕೃತ ಉಪನ್ಯಾಸಕರ ವೇದಿಕೆ ಅಧ್ಯಕ್ಷ

ಸಂಸ್ಥೆ ಅಧ್ಯಕ್ಷ ಕೇಶವ ಸಂಪೆಕೈ ಮಾತನಾಡಿ, ಸಮಾಜದ ಬದಲಾವಣೆಗೆ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ಉತ್ತಮ ಪ್ರಜೆಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸಂಸ್ಕೃತ ಉಪನ್ಯಾಸಕರು, ವಿದ್ಯಾರ್ಥಿಗಳಿಗಾಗಿ ಸಂಸ್ಕೃತ ವಿಷಯ ಕುರಿತ ವಿಚಾರಗೋಷ್ಠಿ ನಡೆಯಿತು. ರೂಪಶ್ರೀ ಕಾಲೇಜು ಪ್ರಾಚಾರ್ಯ ಎಂ.ಎಂ.ತಿಮ್ಮಪ್ಪ, ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಜ್ಯೋತಿ, ಶುಭಾ, ವಿ.ಜಿ.ಶ್ರೀಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net