

ಸಾಗರ: ನಗರದ ಅಭಿವೃದ್ಧಿ ದೃಷ್ಟಿಯಿಂದ ಕಾಲಮಿತಿಯೊಳಗೆ ಬಿ.ಎಚ್.ರಸ್ತೆ ಅಗಲೀಕರಣಕ್ಕೆ ಶಾಸಕರು ಸೂಚಿಸಿದ್ದಾರೆ. ಭೂಸ್ವಾಧೀನಕ್ಕೆ ಸಂಬಂಧಿಸಿ ಸಾಗರ ನಗರಸಭೆಯಿಂದ ನೋಟಿಸ್ ನೀಡಲಾಗುತ್ತಿದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
ಸಾಗರದ ಬಿ.ಎಚ್.ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನೆಲೆಯಲ್ಲಿ ನಿವಾಸಿಗಳಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ನೋಟಿಸ್ ನೀಡಿ ಮಾತನಾಡಿ, ಗಾಂಧಿನಗರ ವೃತ್ತದಿಂದ ಸಣ್ಣಮನೆ ಸೇತುವೆವರೆಗೆ 283 ಆಸ್ತಿ ಮಾಲೀಕರಿದ್ದು, ರಸ್ತೆ ಅಗಲೀಕರಣಕ್ಕಾಗಿ ಅವರ ಸ್ವತ್ತನ್ನು ಸ್ವಾಧೀನ ಮಾಡಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಪರಿಹಾರ ನೀಡಲು 34 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ 30 ದಿನದಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
30 ದಿನದೊಳಗೆ ಬಿ.ಎಚ್.ರಸ್ತೆ ನಿವಾಸಿಗಳು ಅಗಲೀಕರಣಕ್ಕೆ ಪೂರಕವಾಗಿ ಸ್ಪಂದಿಸಬೇಕು. ಒಂದೊಮ್ಮೆ ನಾವು ನೀಡುವ ಪರಿಹಾರ ಕಡಿಮೆಯಾಗುತ್ತಿದೆ ಎಂದರೆ ಜಿಲ್ಲಾಧಿಕಾರಿಗೆ ಮನವಿ ಮಾಡಬಹುದು. ಜಿಲ್ಲಾಧಿಕಾರಿ ಬಳಿಯೂ ನ್ಯಾಯಸಮ್ಮತ ಪರಿಹಾರ ಸಿಗದಿದ್ದರೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಇರುತ್ತದೆ ಎಂದರು.
ನಗರವ್ಯಾಪ್ತಿಯೊಳಗೆ ಬಿ.ಎಚ್. ರಸ್ತೆ ಅಗಲೀಕರಣಕ್ಕೆ ಆರು ತಿಂಗಳಿನಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ವಾಹನಗಳ ದಟ್ಟಣೆ ಹೆಚ್ಚಾಗಿ ಪಾದಚಾರಿಗಳ ಓಡಾಟ, ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ನಗರಸಭೆ ಸದಸ್ಯ ಸೈಯದ್ ಜಾಕೀರ್, ಪರಿಸರ ಅಭಿಯಂತ ಮದನ್, ಅಧಿಕಾರಿಗಳು ಇದ್ದರು.