

ತೀರ್ಥಹಳ್ಳಿ: ಹುಂಚದಕಟ್ಟೆ ರಾಮನಸರ ಶ್ರೀ ನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಕ್ಷೇತ್ರದ ಪ್ರತಿನಿಧಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಹಲ್ಲಾಡಿ ಕ್ಷೇತ್ರದಿಂದ ವೇದ ಬ್ರಹ್ಮಶ್ರೀ ಮುರಳೀಧರ ಕೆದ್ಲಾಯಿ ಅವರು ಕೇದಾರನಾಥಕ್ಕೆ ಪಾದಯಾತ್ರೆ ಆರಂಭಿಸಿದರು.
ರಾಮನಸರ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಮನುಷ್ಯನಿಗೆ ನೆಮ್ಮದಿ ನೀಡುತ್ತವೆ. ಜೀವನದಲ್ಲಿ ಕಷ್ಟ, ಸಂಕಷ್ಟಗಳಿಗೆ ಒಳಗಾದ ಸಂದರ್ಭ ದೇವರ ದರ್ಶನ ಪಡೆದರೆ ಜೀವನ ಉತ್ಸಾಹ ವೃದ್ಧಿಸುತ್ತದೆ. ನಮ್ಮಲ್ಲಿ ಸ್ಫೂರ್ತಿ ತುಂಬುವ ಜತೆಯಲ್ಲಿ ಕಷ್ಟಗಳನ್ನು ಎದುರಿಸುವ ಶಕ್ತಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.
ಕೇದಾರನಾಥಕ್ಕೆ ಶ್ರೀಕ್ಷೇತ್ರ ಶ್ರೀರಾಮನಸರದಿಂದ ದೇವರ ಆಶೀರ್ವಾದ ಪಡೆದು ಯಾತ್ರೆ ಆರಂಭಿಸಿದ್ದು, ರಾಮನಸರ ಶ್ರೀ ನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳು ಬೇಡಿ ಬರುವ ಭಕ್ತರಿಗೆ ದರ್ಶನ ನೀಡುತ್ತ ಕಷ್ಟಗಳನ್ನು ನಿವಾರಿಸುತ್ತವೆ. ಈ ಕ್ಷೇತ್ರದ ಪ್ರತಿನಿಧಿಯಾಗಿ ಕೇದಾರನಾಥ ಕ್ಷೇತ್ರಕ್ಕೆ ತೆರಳುತ್ತಿದ್ದೇನೆ ಎಂದರು.
ದೇವಸ್ಥಾನ ಆಡಳಿತ ಮಂಡಳಿಯಿಂದ ಮುರಳೀಧರ ಕೆದ್ಲಾಯಿ ಅವರನ್ನು ಬೀಳ್ಕೊಡಲಾಯಿತು. ದೇವಸ್ಥಾನ ಧರ್ಮದರ್ಶಿ ನಾಗರಾಜ್, ಚಂದ್ರಶೇಖರ್, ಪ್ರಧಾನ ಅರ್ಚಕ ಸುರೇಶ್ ಭಟ್, ರಮೇಶ್ ಭಟ್ ಸಾಗರ, ರಚನಾ, ಮಂಜುನಾಥ್, ಸುನಿಲ್, ಮುರುಗೇಶ್ ಮತ್ತಿತರರಿದ್ದರು.