

ಶಿಕಾರಿಪುರ: ಪುಸ್ತಕದ ಅರಿವಿನ ಜತೆಗೆ ಸಾಮಾನ್ಯ ಜನಜೀವನದ ಜ್ಞಾನವನ್ನೂ ಪಡೆದುಕೊಳ್ಳಬೇಕು. ವಾಸ್ತವ ಬದುಕು ಪುಸ್ತಕದ ಬದುಕಿಗಿಂತ ಭಿನ್ನವಾಗಿರುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ ಹೇಳಿದರು.
ಕುಮದ್ವತಿ ಪಿಯು ಕಾಲೇಜಿನ ವಾರ್ಷಿಕ ಕ್ರೀಡಾ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡಾಕೂಟ ಆರೋಗ್ಯಕ್ಕೆ ಪೂರಕವಾಗಿದ್ದು, ನಮ್ಮಲ್ಲಿ ಸ್ಪರ್ಧಾ ಮನೋಭಾವ ಸೃಜಿಸುತ್ತದೆ. ಪಠ್ಯೇತರ ಚಟುವಟಿಕೆಗಳು ವಿಶೇಷ ಅನುಭವ ಮೂಡಿಸುತ್ತವೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಒತ್ತಡದ ಮನೋಭಾವ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನೋಸ್ಥೈರ್ಯ ಹೆಚ್ಚುತ್ತದೆ. ಭಾರತ ಕೃಷಿ ಪ್ರಧಾನವಾಗಿದ್ದು, ವಿದ್ಯಾವಂತರು ಕೂಡ ಕೃಷಿ ಕಡೆಗೆ ತಿರುಗಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯುವ ತಂತ್ರಜ್ಞಾನವನ್ನು ಇಂದಿನ ಪೀಳಿಗೆ ಗಮನಿಸುತ್ತಿದೆ ಎಂದರು.
ಡಾ. ಶಿವಕುಮಾರ ಮಾತನಾಡಿ, ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿದಾಗ ಯಶಸ್ಸು ದೊರೆಯುತ್ತದೆ. ಕೆಲ ವರ್ಷಗಳ ಹಿಂದೆ ವಿಶ್ವ ಚಾಂಪಿಯನ್ ಆಗುತ್ತೇನೆಂದ ಬಾಲಕನೊಬ್ಬ ಇಂದು ವಿಶ್ವ ಚಾಂಪಿಯನ್ ಆಗಿದ್ದಾನೆ. ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲಿಯೇ ಗುರಿ ನಿರ್ಧರಿಸಬೇಕು ಎಂದು ಹೇಳಿದರು.
ಪ್ರಾಚಾರ್ಯ ವೀರೇಂದ್ರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಜತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ. ರಾಜ್ಯ ಮಟ್ಟದ ಕ್ರೀಡಾಪಟುಗಳು ಇದ್ದಾರೆ. ಕಳೆದ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ರ‌್ಯಾಂಕ್, ವಿಜ್ಞಾನ ವಿಭಾಗದಲ್ಲಿ 9ನೇ ರ‌್ಯಾಂಕ್ ಕೂಡ ಬಂದಿದೆ ಎಂದು ತಿಳಿಸಿದರು.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಎಕ್ಸಲೆನ್ಸ್ ಅವಾರ್ಡ್, ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಾಗೂ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಸ್ಥ ವಿಶ್ವನಾಥ್, ಸಿದ್ದೇಶ್ವರ ಇತರರಿದ್ದರು.