

ಹೊಸನಗರ: ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಜತೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಇಒ ಎಚ್.ಆರ್.ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಮೇಲಿನಬೇಸಿಗೆ ಗ್ರಾಪಂ ವ್ಯಾಪ್ತಿ ಜಯನಗರ ಸರ್ಕಾರಿ ಪ್ರೌಢಶಾಲೆಗೆ ಉಜ್ಜೀವನ್ ಬ್ಯಾಂಕ್, ಚೋಟೆ ಕದಮ್, ಪರಿಣಾಮ್ ಫೌಂಡೇಷನ್ ಸಹಯೋಗದಲ್ಲಿ 10 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಗ್ರಂಥಾಲಯ ಮತ್ತು ಶೌಚಗೃಹ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಉಪಯುಕ್ತ ಸೇವೆಗಳನ್ನು ಸಂಘ ಸಂಸ್ಥೆಗಳು ಸಲ್ಲಿಸಲು ಮುಂದಾಗಬೇಕು. ಗ್ರಂಥಾಲಯ, ಶೌಚಗೃಹ ನಿರ್ಮಿಸಲು ಆರ್ಥಿಕ ನೆರವು ನೀಡಿದ ಬ್ಯಾಂಕ್ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಜ್ಜೀವನ್ ಬ್ಯಾಂಕ್ ಹಿರಿಯ ಮ್ಯಾನೇಜರ್ ಮೇಲ್ವಿನ್ ಡಿ. ಮೆಲ್ಲೋ, ಮ್ಯಾನೇಜರ್ ನಾಗರಾಜ್, ಮೇಲಿನ ಬೇಸಿಗೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಲಕ್ಷ್ಮಣ್‌ಗೌಡ, ಚಂದ್ರಕಲಾ, ಚೇತನ್ ಮುಖ್ಯಶಿಕ್ಷಕ ರಂಗಸ್ವಾಮಿ, ಶಿಕ್ಷಕ ಪುಟ್ಟಪ್ಪ ಇತರರಿದ್ದರು.