

ಸಾಗರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿ ಸದೃಢ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲೂಕಿನ ಬೆಳೆಯೂರು-ದಿಗಟೆಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ತಲುಪಿಸಬೇಕು. ಮಕ್ಕಳನ್ನು ದೇಶದ ಸಂಪನ್ಮೂಲ ಶಕ್ತಿಯನ್ನಾಗಿ ರೂಪಿಸಬೇಕು. ಮಕ್ಕಳ ಭವಿಷ್ಯ ರೂಪುಗೊಂಡಂತೆ ದೇಶ ಕೂಡ ಪ್ರಗತಿಯತ್ತ ಸಾಗುತ್ತದೆ ಎಂದು ತಿಳಿಸಿದರು.
ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಏನೇ ಸಮಸ್ಯೆ ಇದ್ದರೂ ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಶಾಲೆ ಶತಮಾನೋತ್ಸವ ಆಚರಿಸುತ್ತಿದೆ ಎಂದರೆ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿರುವವರು ಹೆಮ್ಮೆಪಡುವ ಸಂಗತಿ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ವಿವಿಧ ಸಾಧಕರನ್ನು ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ನಾರಾಯಣಪ್ಪ ಕೆ.ದಿಗಟೆಕೊಪ್ಪ ಸನ್ಮಾನಿಸಿದರು. ಶಾಲಾ ಮಕ್ಕಳು, ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಮತ್ತು ಸಾಂಸ್ಕೃತಿಕ ಕಾಯಕ್ರಮ ನಡೆಯಿತು. ಕಾಸ್ಪಾಡಿಯ ರಾಜು ಭಾಗವತ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಂದ ಭೀಷ್ಮವಿಜಯ-ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಇ.ಪರಶುರಾಮಪ್ಪ, ಹೊಳೆಯಪ್ಪ, ಕಲಸೆ ಚಂದ್ರಪ್ಪ, ಶಿಕ್ಷಣ ಸಂಯೋಜಕ ಪಾಲಾಕ್ಷಪ್ಪ, ಉಷಾ ಪ್ರಸನ್ನ, ಸುಮಾ, ರಾಧಾಕೃಷ್ಣ ಬಂದಗದ್ದೆ, ಮುಖ್ಯಶಿಕ್ಷಕ ಎಂ.ಪಿ.ಸತ್ಯನಾರಾಯಣ, ಸುವರ್ಣಮ್ಮ ಆಚಾರ್, ಎಸ್ಡಿಎಂಸಿ ಅಧ್ಯಕ್ಷ ಡಿ.ಕೆ.ಅಣ್ಣಪ್ಪ, ಬಿ.ಆರ್.ವೆಂಕಟೇಶ್ ಇತರರಿದ್ದರು.