

ಶಿಕಾರಿಪುರ: ಶಿಕ್ಷಣ ಮುಖೇನ ಮಾನವೀಯ ಮೌಲ್ಯಗಳ ಅರಿವು ಮೂಡಿಸುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ, ಮೈತ್ರಾದೇವಿ ಸ್ಮರಣಾರ್ಥ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಅಡಿಪಾಯ. ಪ್ರತಿಭಾನ್ವಿತ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕುಟುಂಬದ ಪ್ರತಿಯೊಬ್ಬರೂ ಸಾಕ್ಷರರಾಗಬೇಕು. ಮಕ್ಕಳು ಯಾವ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶಗಳಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ತಾಯಿ ಮೈತ್ರಾದೇವಿ ಅವರ ಸವಿನೆನಪಿಗಾಗಿ ಪ್ರತಿ ವರ್ಷ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಮಕ್ಕಳಲ್ಲಿ ಓದುವ ಹಂಬಲ ಹೆಚ್ಚಾಗಬೇಕು. ಪ್ರತಿ ಮಗುವೂ ಸಮಾಜದ ಆಸ್ತಿ, ದೇಶದ ಭವಿಷ್ಯದ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಹಾಲಪ್ಪ, ವಸಂತ ಗೌಡ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಪ್ರಾಚಾರ್ಯ ಹೋಬ್ಯಾನಾಯ್ಕ, ಮಲ್ಲಿಕಾರ್ಜುನ, ನಾಗಾನಾಯ್ಕ, ಕೆ.ಎಚ್.ಪುಟ್ಟಪ್ಪ, ಸುಧಾಕರ್ ಹಿರೇಕಸವಿ, ರುಕ್ಮಿಣಿ, ಉಮಾ, ಅಶ್ವಿನಿ, ಆರತಿ, ಪ್ರೇಮಾ ಇತರರಿದ್ದರು.