

ಕಾರ್ಗಲ್: ಐದಾರು ದಿನಗಳಿಂದ ಶರಾವತಿ ಕಣಿವೆಯಲ್ಲಿ ನಿರಂತರವಾಗಿ ಮಳೆ ಬರುತ್ತಿದ್ದು, ಶನಿವಾರ ರಾತ್ರಿ ಆರಂಭವಾದ ಗಾಳಿ ಸಮೇತ ಮಳೆ ಭಾನುವಾರವೂ ಸಹ ಧಾರಾಕಾರವಾಗಿ ಸುರಿಯಿತು. ಪಪಂ ವ್ಯಾಪ್ತಿಯಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ.
ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಸಂಜೆವರೆಗೂ ವಿದ್ಯುತ್ ವ್ಯತ್ಯಯವಾಗಿತ್ತು. ಭಾನುವಾರ ಕಾರ್ಗಲ್ ಪಟ್ಟಣದಲ್ಲಿ ಸಂತೆ ಇದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಭಾರಂಗಿ ಹೋಬಳಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿ ಅತ್ತಿಗೋಡು ಗ್ರಾಮದ ಯೋಗರಾಜ್ ಜೈನ್ ಎಂಬುವವರ ಮನೆ ಮೇಲೆ ಮರವೊಂದು ಶುಕ್ರವಾರ ರಾತ್ರಿ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಸಂಪೂರ್ಣ ಕುಸಿದಿದೆ.ಪಪಂ ಅಧ್ಯಕ್ಷ ಎಂ.ರಾಜು, ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಹಾಗೂ ಗ್ರಾಮ ಲೆಕ್ಕಿಗರು ಭೇಟಿ ನೀಡಿದ್ದರು.
ಐದಾರು ದಿನಗಳಿಂದ ಮಳೆ ಹೆಚ್ಚಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತ ಕಳೆಗಟ್ಟಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ದಿನವಾದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಕಾರ್ಗಲ್ ಪಟ್ಟಣ ವ್ಯಾಪ್ತಿಯಲ್ಲಿ 74.8 ಮಿ.ಮೀ. ಹಾಗೂ ಲಿಂಗನಮಕ್ಕಿ ಅಣೆಕಟ್ಟಿನ ವ್ಯಾಪ್ತಿ 49.4 ಮಿ.ಮೀ ಮಳೆಯಾಗಿದೆ.