ಕಾಂಗ್ರೆಸ್ ಸರ್ಕಾರದಿಂದ ಜನಸಾಮಾನ್ಯರ ಪ್ರಗತಿ

20sor2
ಸೊರಬದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಸಿ.ಎಸ್.ಚಂದ್ರಭೂಪಾಲ್, ರವಿಕುಮಾರ್, ಜೈಶೀಲ ಗೌಡ ಇತರರಿದ್ದರು.
Published on

ಸೊರಬ: ಸಾಮಾನ್ಯ ಜನರ ಪ್ರಗತಿ ಬಯಸುವ, ಕಮಿಷನ್ ಇಲ್ಲದ ಯೋಜನೆಗಳು ಕಾಂಗ್ರೆಸ್ ಸರ್ಕಾರದ್ದಾಗಿವೆ. ವಿಪಕ್ಷದವರು ಮಾಹಿತಿ ತಿಳಿಯದೆ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದೂರಿದರು.

ಪಟ್ಟಣದ ರಂಗಮಂದಿರದ ಎದುರು ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆ, ಫಲಾನುಭವಿಗಳಿಗೆ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸರ್ಕಾರದ್ದು ಒಂದೇ ಬಾಗಿಲು. ವಿಪಕ್ಷದಲ್ಲಿ ಮೂರು ಬಾಗಿಲುಗಳಿದ್ದು, ಅದನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಶೀಘ್ರ ಕೆಲಸ ಆರಂಭಿಸಿ: ಸೊರಬ ಬ್ಲಾಕ್‌ನಲ್ಲಿ ಒಟ್ಟು 39.26 ಕೋಟಿ ರೂ. ವೆಚ್ಚದ 58 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, 25 ಕಾಮಗಾರಿಗಳ ಭೂಮಿ ಪೂಜೆ, ಕಾರ್ಮಿಕ ಇಲಾಖೆಯಿಂದ 215 ಕಿಟ್, ಮೀನುಗಾರಿಕೆ ಇಲಾಖೆಯಿಂದ 44 ಕಿಟ್, 3 ಅಂಗವಿಕಲರಿಗೆ ಬೈಕ್ ಹಾಗೂ 26 ಪಂಪಸೆಟ್ ಫಲಾನುಭವಿಗಳಿಗೆ ಬೋರ್‌ವೆಲ್ ಪಂಪ್‌ಸೆಟ್ ವಿತರಣೆ ಕಾರ್ಯಕ್ರಮ ನಡೆಯಿತು. ಸಣ್ಣ ಪ್ರಮಾಣದ ಅನುದಾನ ಕಾರ್ಯಕ್ರಮ ಆಗಿದ್ದು, ಭೂಮಿಪೂಜೆ ಆಗಿರುವ ಕಾಮಗಾರಿಗಳು ನಾಳೆಯಿಂದಲೇ ಕೆಲಸ ಆರಂಭಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಎರಡು ವರ್ಷದಲ್ಲಿ ಶರಾವತಿ ಕುಡಿಯುವ ನೀರಿನ ಯೋಜನೆ ತಾಲೂಕಿನ ಎಲ್ಲ ಮನೆಗಳಿಗೆ ತಲುಪಲಿದೆ. 960 ಕೋಟಿ ರೂ. ಅನುದಾನದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಮುಂದಿನ ತಿಂಗಳು ಮನೆಗಳು ಮಂಜೂರು ಆಗಲಿವೆ ಎಂದರು.

ಅಮೆರಿಕದಲ್ಲಿ ಡಿ.24ಕ್ಕೆ ನಟ ಶಿವರಾಜ್‌ಕುಮಾರ್ ಅವರ ಶಸ್ತ್ರಚಿಕಿತ್ಸೆ ನಡೆಯಲಿದ್ದು, ನಾನು ಕೂಡ ಅಮೆರಿಕಕ್ಕೆ ಹೋಗಲಿದ್ದೇನೆ. ನಾಡಿನ ಜನರ ಪ್ರೀತಿ, ಆಶೀರ್ವಾದ ಶಿವಣ್ಣ ಅವರ ಮೇಲಿರಬೇಕು. ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ

ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಪಂಪ್‌ಸೆಟ್‌ಗಳನ್ನು ನೀಡಬೇಕಿತ್ತು. ಆದರೆ ನೀಡಿರಲಿಲ್ಲ. ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನೀಡಿದ್ದೇವೆ ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ತಾಲೂಕು ಅಧ್ಯಕ್ಷ ಜೈಶೀಲ ಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ, ಇಒ ಡಾ.ಪ್ರದೀಪ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net