

ತಾಳಗುಪ್ಪ: ಪಠ್ಯ ವಿಷಯಕ್ಕೆ ಅನುಗುಣವಾಗಿ ಪುಸ್ತಕದಲ್ಲಿ ಮುದ್ರಣಗೊಳ್ಳುವ ಚಿತ್ರ ಕಲಾಕೃತಿಗಳಿಗೆ ಪ್ರತಿಯಾಗಿ ಗ್ರಾಮೀಣ ಜನಪದ ಹಸೆ ಚಿತ್ತಾರಗಳನ್ನು ಸಹ ಮುದ್ರಿಸಬಹುದು ಎಂದು ಹಸೆ ಚಿತ್ತಾರ ಕಲಾವಿದ, ಸಂಶೋಧಕ ರವಿರಾಜ್ ಸಾಗರ್ ಹೇಳಿದರು.
ಮಂಡಗಳಲೆಯ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಸೆ ಚಿತ್ತಾರ ಕಲಾವಿದೆ ಜೆ.ಎ.ಉಷಾ ಆಯೋಜಿಸಿದ್ದ ಕಲಿ-ಕಲಿಸು ಕಾರ್ಯಕ್ರಮದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಮತ್ತು ಡಿಎಸ್‌ಇಆರ್‌ಟಿಇ ಪ್ರಕಟಿಸಿದ ಮಕ್ಕಳ ಹಸೆ ಚಿತ್ರೋತ್ಸವ ಮತ್ತು ಪಠ್ಯಂತರ್ಗತ ಹಸೆ ಚಿತ್ತಾರ ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಹಸೆ ಚಿತ್ತಾರ ಶೈಲಿಯನ್ನು ಮಾದರಿಯಾಗಿ ಇಟ್ಟುಕೊಂಡು ಸಂಪ್ರದಾಯದ ಚೌಕಟ್ಟಿನ ಆಚೆ ವಿಸ್ತರಿಸಿ ಹಸೆ ಚಿತ್ತಾರ ಹಾಗೂ ಕಥಾ ಚಿತ್ರ ಸಂಯೋಜಿಸುವ ಪರಿಕಲ್ಪನೆಯೊಂದಿಗೆ ವಿಭಿನ್ನ ಮಾದರಿಗಳನ್ನು ಒಳಗೊಂಡಿರುವ ವಿಶಿಷ್ಟ ಕೃತಿ ಇದಾಗಲಿದೆ ಎಂದು ತಿಳಿಸಿದರು.
ರಾಜು ಕುಸ್ಕೂರು ಮಾತನಾಡಿ, ದೀವರ ಪಾರಂಪರಿಕ ಕಲೆ ಹಸೆ ಚಿತ್ತಾರ. ಕಲಿ ಕಲಿಸು ಕಾರ್ಯ ಯೋಜನೆಯನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ರವಿರಾಜ್ ಸಾಗರ್, ಜಾನಪದ ಕಲಾವಿದೆ ಅನಸೂಯಮ್ಮ, ಲಕ್ಷ್ಮಮ್ಮ, ರೇಣುಕಮ್ಮ ಮಂಡಗಳಲೆ ಹಸೆ ಚಿತ್ತಾರ ರಚನೆಯ ವಿವಿಧ ಆಯಾಮಗಳನ್ನು ಪರಿಚಯಿಸಿದರು. ಗ್ರಾಪಂ ಸದಸ್ಯರಾದ ಪುಷ್ಪಾ ಮಂಡಗಳಲೆ, ಭೂಕೇಶ್ವರಪ್ಪ, ಉಷಾ, ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.