

ತ್ಯಾಗರ್ತಿ: ವಿದ್ಯಾರ್ಥಿ ದೆಸೆಯಿಂದಲೇ ನಿರಂತರ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಟಿ.ನಟರಾಜ್ ಹೇಳಿದರು.
ವಿಶ್ವ ಯೋಗ ದಿನ ಅಂಗವಾಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ನಿರಂತರ ಅಭ್ಯಾಸ ಮಾಡಬೇಕು. ಇದರಿಂದ ಪಠ್ಯದಲ್ಲಿ ಏಕಾಗ್ರತೆ, ಮಾನಸಿಕ, ದೈಹಿಕ ಸದೃಢತೆ ಉಂಟಾಗುತ್ತದೆ ಎಂದು ತಿಳಿಸಿದರು.
ದೈಹಿಕ ಶಿಕ್ಷಕ ಜಿ.ಎನ್.ಕೃಷ್ಣಮೂರ್ತಿ ಯೋಗದ ಮಹತ್ವ ವಿವರಿಸಿದರು. ಸಹಶಿಕ್ಷಕರಾದ ಜಯಪ್ಪ, ನಾಗರಾಜ್, ಉಮೇಶ್, ರವಿಶಂಕರ್, ಷಣ್ಮುಖಪ್ಪ, ವಿಜಯಾನಂದ ಇತರರಿದ್ದರು.
ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಯೋಗ ದಿನದ ಮಹತ್ವ ತಿಳಿಸಿ ಯೋಗಾಭ್ಯಾಸ ಮಾಡಿಸಲಾಯಿತು. ಮುಖ್ಯಶಿಕ್ಷಕ ತೊಳಜಾನಾಯ್ಕ, ದೈಹಿಕ ಶಿಕ್ಷಕ ಕಮಲಾಪತಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸರ್ವೇಶ್ ಇತರರಿದ್ದರು.