ಹೆಣ್ಣು ಹೊರೆಯಲ್ಲ, ಕುಟುಂಬದ ಶಕ್ತಿ: ನ್ಯಾಯಾಧೀಶ ಜಯಂತ್‌ಕುಮಾರ್

IMG_20210331_105007
Published on

ಶಿವಮೊಗ್ಗ: ಹೆಣ್ಣು ಹೊರೆಯಲ್ಲ, ಆಕೆ ಕುಟುಂಬ ಮತ್ತು ಸಮಾಜಕ್ಕೆ ದೊಡ್ಡ ಶಕ್ತಿಯಾಗಿದ್ದಾಳೆ ಎಂದು ಶಿವಮೊಗ್ಗ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಬಿ. ಜಯಂತಕುಮಾರ್ ಹೇಳಿದರು.
ಡಿಎಚ್‌ಒ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಪಿಸಿಪಿಎನ್‌ಡಿಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ) ಕಾಯ್ದೆ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಕುಟುಂಬಕ್ಕೆ ಸೆಕ್ಯೂರಿಟಿ ಇದ್ದಂತೆ. ಆಕೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.
ಯಾವ ಕಾಯ್ದೆಗಳನ್ನು ಸಮಾಜದಲ್ಲಿ ಜಾರಿಗೆ ತರುತ್ತಿದ್ದೇವೆಯೋ ಆ ಕಾಯ್ದೆಗಳ ಮೂಲ ಉದ್ದೇಶಗಳನ್ನು ಮೊದಲು ಅರಿತುಕೊಳ್ಳಬೇಕು. ಆಗ ಮಾತ್ರ ಅನುಷ್ಠಾನಗೊಳಿಸಲು ಸುಲಭ ಮತ್ತು ಸರಳವಾಗುತ್ತದೆ. ಕಾಯ್ದೆಗಳನ್ನು ಅರ್ಥಮಾಡಿಕೊಳ್ಳದೇ ಅನುಷ್ಠಾನಗೊಳಿಸಿದರೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾಲೋಚನೆ ನಡೆಸಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಲಿದ್ದು, ಕೆಲವೊಮ್ಮೆ ತಿದ್ದುಪಡಿಯೂ ಆಗಲಿವೆ. ಅದೇ ರೀತಿ ಪಿಸಿಪಿಎನ್‌ಡಿಟಿ ಕಾಯ್ದೆಯೂ ತಿದ್ದುಪಡಿಯಾಗಿದೆ ಎಂದರು.
ಕಾನೂನು ಉಲ್ಲಂಘಿಸಿದವರು ಒಮ್ಮೆಯಾದರೂ ಸಿಕ್ಕಿಬೀಳುತ್ತಾರೆಂಬುದನ್ನು ಮರೆಯಬಾದರು. ಕಾನೂನನ್ನು ಗೌರವಿಸಬೇಕು. ಆಗ ಮಾತ್ರ ದೇಶ ಆರೋಗ್ಯ ಪೂರ್ಣ ಅಭಿವೃದ್ಧಿಯತ್ತ ದಾಪುಗಾಲಿಡುತ್ತದೆ. ಆ ಕೆಲಸ ಆಗಬೇಕಾದರೆ ಮೊದಲು ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಹೆಣ್ಣು ಭ್ರೂಣ ಹತ್ಯೆಗಳನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net