

ಸೊರಬ: ಹೊಸಪೇಟೆ ಬಡಾವಣೆಯಲ್ಲಿ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಭೇಟಿ ನೀಡಿ ಪರಿಶೀಲಿಸಿದರು.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹೊಳೆಯಂತೆ ಹರಿಯುತ್ತದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಸರಿಪಡಿಸಿಲ್ಲ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ ದೂರಿದರು.
ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಪ್ರತಿಕ್ರಿಯಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು, ಕೆಲವಡೆ ಚರಂಡಿ ಮುಚ್ಚಿದ್ದು, ಸ್ವಚ್ಛಗೊಳಿಸಿ ನೀರು ಹರಿಯುವಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕ ಎಸ್.ರಣಜಿತ್ಕುಮಾರ್, ಆರೋಗ್ಯ ನಿರೀಕ್ಷಕ ಎ.ಎನ್.ರವಿಕುಮಾರ್ ನಾಯ್ಕ, ಹೊಸಪೇಟೆ ಬಡಾವಣೆ ನಿವಾಸಿ ನವೀನ್ಕುಮಾರ್ ಇತರರಿದ್ದರು.