

ಭದ್ರಾವತಿ: ಅಡಕೆ ಬೆಳೆಗಾರರು ಗುಣಮಟ್ಟದ ಅಡಕೆಯನ್ನು ಮ್ಯಾಮ್ಕೋಸ್‌ಗೆ ಸರಬರಾಜು ಮೂಡುವ ಮೂಲಕ ಸರಿಯಾದ ಧಾರಣೆ ಪಡೆಯಬಹುದು. ಅಡಕೆ ಬೆಳೆದ ರೈತರು ಶೇ. 40ರಷ್ಟು ಅಡಕೆಯನ್ನಾದರೂ ಸಂಸ್ಥೆಗೆ ಪೂರೈಕೆ ಮಾಡುವ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹೇಳಿದರು.
ಸಹಕಾರ ಭಾರತಿಯಿಂದ ಪಾಂಡುರಂಗ ಕಲ್ಯಾಣ ಮಂದಿರಲ್ಲಿ ಏರ್ಪಡಿಸಿದ್ದ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಅಸ್ಸಾಂ, ಮೇಘಾಲಯ ಕಡೆ ಅಡಕೆಯನ್ನು ಕಾಡು ಬೆಳೆ ಎಂದು ಪರಿಗಣಿಸಿದ್ದಾರೆ. ಆದರೆ ನಮ್ಮ ಭಾಗದಲ್ಲಿ ವಾಣಿಜ್ಯ ಬೆಳೆ ಎಂದು ಪರಿಗಣಿಸಲಾಗಿದೆ. ಅಡಕೆ ಉಪಯೋಗದಿಂದ ಕ್ಯಾನ್ಸರ್ ಎನ್ನುವ ಆರೋಪ ಸರಿಯಲ್ಲ. ಕ್ಯಾನ್ಸರ್ ಬರುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ಅಡಕೆ ಬೆಳೆಗಾರರು ಗುಣಮಟ್ಟದ ಅಡಕೆಯನ್ನು ಬೆಳೆದು ರಾಸಾಯನಿಕ ಮಿಶ್ರಣ ಮಾಡದೆ ಹೆಚ್ಚಿನ ದರ ಪಡೆಯಬಹುದು. ಸಂಸ್ಥೆ ಧಾರಣೆ ವಿಚಾರದಲ್ಲಿ ರೈತರ ಹಿತ ಕಾಪಾಡುತ್ತಿದೆ. ರಿಯಾಯಿತಿ ದರದಲ್ಲಿ ರಸಗೊಬ್ಬರ ಪೂರೈಕೆ, ಅಭರಣಗಳ ಮೇಲಿನ ಸಾಲ, ಸೌಲಭ್ಯ ನೀಡುವುದು ಇತ್ಯಾದಿ ಸೇವೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಎಚ್.ಎಸ್.ಮಹೇಶ್ ಹುಲ್ಕುಳಿ ಮ್ಯಾಮ್ಕೋಸ್ ಉಪಾಧ್ಯಕ್ಷ
ನೇಪಾಳ, ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಕೆಗೆ ತೆರಿಗೆ ವಿಧಿಸಿರುವುದರಿಂದ ನಮ್ಮ ಬೆಳೆಯ ಧಾರಣೆಗೆ ತೊಂದರೆ ಆಗಿಲ್ಲ. ಉತ್ತರ ಪ್ರದೇಶ ರಾಜ್ಯದಲ್ಲಿ ಅಡಕೆ ನಿಷೇಧ ತೆರವು ಮಾಡಿದ್ದಾರೆ. ಅಡಕೆ ಶೇ.7.5ರಿಂದ ಶೇ. 13-14 ತೇವಾಂಶ ಇರುತ್ತದೆ. ಆದರೆ ಶೇ.11.5 ತೇವಾಂಶ ಇದ್ದರೆ ಗುಣಮಟ್ಟದ ಅಡಕೆ ಎಂದು ಪರಿಗಣಿಸುತ್ತಾರೆ ಎಂದು ಹೇಳಿದರು.
ಸಂಸ್ಥೆಯಲ್ಲಿ 2,275 ಷೇರುದಾರರಿದ್ದು, 740 ಜನರು ವಹಿವಾಟು ನಡೆಸುತ್ತಿದ್ದಾರೆ. 336 ರೈತರು ಗುಂಪು ವಿಮೆಗೆ ಒಳಪಟ್ಟಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕು. ಸೆ.20ರಂದು ಮ್ಯಾಮ್ಕೋಸ್ ಸರ್ವ ಸದಸ್ಯರ ಸಭೆಯು ಸಾಗರ ರಸ್ತೆಯಲ್ಲಿರುವ ಪೆಸಿಟ್ ಕಾಲೇಜಿನ ಆವರಣದಲ್ಲ್ಲಿ ನಡೆಯಲಿದ್ದು, ಷೇರುದಾರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಿಳಿಸಿದರು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಯೋಗೀಶ್‌ಕುಮಾರ್, ಜಿ.ಇ.ವಿರೂಪಾಕ್ಷಪ್ಪ, ನಿರ್ದೇಶಕರಾದ ಪ್ರಸನ್ನ ಹೆಬ್ಬಾರ್, ಜಯಶ್ರೀ, ಸಹನಾ, ರತ್ನಾಕರ್, ಎಂ.ಬಿ.ಚನ್ನವೀರಪ್ಪ, ಕೀರ್ತಿರಾಜ್, ವೀರೇಶ್, ಭರ್ಮಪ್ಪ, ನಂದನ್, ಸುರೇಶ್, ತಿಮ್ಮಪ್ಪ, ಸತೀಶ್, ವೈ.ಎಸ್.ಸುಬ್ರಹ್ಮಣ್ಯ, ನರೇಂದ್ರ ಇತರರಿದ್ದರು.