

ಶಿವಮೊಗ್ಗ: ರಾಷ್ಟ್ರದ್ರೋಹದ ಚಟುವಟಿಕೆ ನಡೆಸುವವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿದ್ದೇವೆ. ಅವರೆಲ್ಲ ಈಗ ಬಾಲ ಮುದುಡಿಕೊಂಡಿದ್ದಾರೆ. ಮತ್ತೆ ಬಾಲ ಬಿಚ್ಚಿದರೆ ಏನು ಮಾಡಬೇಕು ಎಂಬುದು ನಮಗೆ ಗೊತ್ತಿಗೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಅಪೇಕ್ಷೆಯಂತೆ ಶಿವಮೊಗ್ಗ ಈಗ ಶಾಂತವಾಗಿದೆ. ರಾಷ್ಟ್ರದ್ರೋಹದ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಮತ್ತೆ ತಲೆಹರಟೆ ಮಾಡಿದರೆ ಎಲ್ಲಿಡಬೇಕೋ ಅಲ್ಲಿಡುತ್ತೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಭೇಟಿ ರಾಜಕೀಯ ಹೊರತಾಗಿತ್ತು. ಬರೋಬ್ಬರಿ 3,800 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗ ಚಾಲನೆ ಕೊಟ್ಟಿದ್ದಾರೆ. ಕೋರ್ ಕಮಿಟಿ ಸಭೆಯಲ್ಲೂ ರಾಜಕೀಯದ ಬಗ್ಗೆ ಚರ್ಚೆ ಆಗಲಿಲ್ಲ. ಮೋದಿ ಅವರು ರಾಜ್ಯಕ್ಕೆ ಬಂದು ಹೋಗಿರುವುದು ನಮಗೆ ಸ್ಫೂರ್ತಿ ಸಿಕ್ಕಂತಾಗಿದೆ ಎಂದು ಈಶ್ವರಪ್ಪ ಹೇಳಿದರು.
75 ಕೋಟಿ ರೂ. ಖರ್ಚು ಮಾಡಿ ಸಿದ್ದರಾಮೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆತಂದಿದ್ದರು. ಆದರೆ ಮಂಗಳೂರಿನಲ್ಲಿ ಮೋದಿ ಸಮಾವೇಶಕ್ಕೆ ಕಾರ್ಯಕರ್ತರ ಶಕ್ತಿಯಿಂದ ಜನರು ತಾವಾಗಿಯೇ ಬಂದಿದ್ದರು. ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರಿಂದ ಜನರ ಒಲವು ಬಿಜೆಪಿ ಕಡೆಗಿರುವುದು ಸಾಬೀತಾಗಿದೆ ಎಂದರು.
ಮುರುಘಾ ಶರಣರ ಬಗ್ಗೆ ಗೌರವವಿದೆ: ಸಾಧು-ಸಂತರೆ ಹಿಂದೂ ಧರ್ಮಕ್ಕೆ ಪ್ರೇರಣೆಯಾಗಿದ್ದಾರೆ. ಚಿತ್ರದುರ್ಗದ ಮುರುಘಾ ಶರಣರ ಬಗ್ಗೆ ಆರೋಪ ಕೇಳಿಬಂದಿದೆ. ತನಿಖೆಯಲ್ಲಿ ಅದು ಸತ್ಯವೋ ಸುಳ್ಳೋ ಎಂಬುದು ಹೊರಬರಲಿ. ಈಗಲೇ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು. ಮುರುಘಾ ಶರಣರು ನನಗೆ ದೇವರ ಸಮಾನ. ಅವರ ಬಗ್ಗೆ ಅಪಾರ ಗೌರವವಿದೆ. ಇದೀಗ ಅವರ ಮೇಲೆ ಆರೋಪ ಕೇಳಿಬಂದಿದೆ. ಆರೋಪ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.