

ತ್ಯಾಗರ್ತಿ: ದೇವಾಲಯಗಳು ಸಮಾಜದ ಸರ್ವಾಂಗೀಣ ಬೆಳವಣಿಗೆಯ ಶ್ರದ್ಧಾಕೇಂದ್ರ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ. ಭೀಮೇಶ್ವರ ಜೋಷಿ ಹೇಳಿದರು.
ತ್ಯಾಗರ್ತಿಯಲ್ಲಿ ಮಾರಿಕಾಂಬಾ ಮತ್ತು ದುರ್ಗಾಂಬಾ ದೇವಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದ ನಂತರ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮಾತೃಸ್ವರೂಪಿ ಮಾರಿಕಾಂಬಾ ದೇವಿ ಉಗ್ರಸ್ವರೂಪದಲ್ಲಿದ್ದರೂ ಅಂತರಂಗದಲ್ಲಿ ತಾಯಿಯ ರೀತಿ ಭಾವನೆ ಹೊಂದಿದ್ದಾಳೆ. ತಪ್ಪಿತಸ್ಥರಲ್ಲದವರಿಗೆ ತಾಯಿ ಎಂದಿಗೂ ಶಿಕ್ಷೆ ನೀಡುವುದಿಲ್ಲ. ಎಲ್ಲರಿಗೂ ಆಕೆ ಒಳಿತು ಬಯಸುತ್ತಾಳೆ. ಆಕೆಯಲ್ಲಿ ಮಾತೃತ್ವದ ಅಂಶವನ್ನು ಕಾಣಬಹುದು. ಕೆಟ್ಟ ಕೆಲಸವನ್ನು ಮಾಡುವ ಜನರಲ್ಲಿನ ಕೆಟ್ಟ ಸಂಸ್ಕಾರದ ವಿನಾಶಕ್ಕಾಗಿ ದೇವಿ ಉಗ್ರ ರೂಪ ತಾಳಿದ್ದಳು ಎಂದು ತಿಳಿಸಿದರು.
ಉತ್ತಮ ಸಂಸ್ಕಾರ ಸಹ ಶ್ರೀಮಂತಿಕೆ: ನಮ್ಮ ಚಿತ್ತ ಶುದ್ಧವಾಗಿದ್ದರೆ ಸಂಪದ್ಭರಿತ ಬದುಕು ನಮಗೆ ಪ್ರಾಪ್ತವಾಗುತ್ತದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ. ಭೀಮೇಶ್ವರ ಜೋಷಿ ಹೇಳಿದರು. ಹಣ ಒಂದೇ ಶ್ರೀಮಂತಿಕೆ ತೋರಿಸುವುದಿಲ್ಲ. ನಿಮ್ಮಲ್ಲಿರುವ ಸಂಸ್ಕಾರವೂ ನಿಮ್ಮ ಶ್ರೀಮಂತಿಕೆ ತೋರಿಸುತ್ತದೆ. ಹಿರಿಯರು ನಮಗೆ ಕೊಟ್ಟ ದೈವಿಕ ಸಂಪತ್ತು, ಉತ್ತಮ ನಡೆ-ನುಡಿ, ಸಂಸ್ಕಾರ ಇತ್ಯಾದಿ ಕೂಡ ವರದಾನವಾಗಿ ಪರಿಣಮಿಸುತ್ತವೆ. ದೇವತಾ ಆರಾಧನೆ ಮತ್ತು ದೇವತಾ ಕಾರ್ಯಗಳೂ ನಮ್ಮ ಸಮಾಜದ ಸಂಪತ್ತನ್ನು ಪ್ರತಿಬಿಂಬಿಸುತ್ತದೆ. ಯಾರಿಗೂ ಕೆಡಕು ಆಗಬಾರದೆಂದು ಬಯಸುವುದೇ ನಿಜವಾದ ಧರ್ಮ ಎಂದು ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತ್ಯಾಗರ್ತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಿರುವುದು ನಮಗೆಲ್ಲ ಸಂತಸದ ವಿಷಯ. ಇಡೀ ಗ್ರಾಮದ ಸರ್ವಾಂಗೀಣ ಬೆಳವಣಿಗೆಗೆ ಆಗಿರುವ ಅಭಿವೃದ್ಧಿ ಎಂದೆನಿಸುತ್ತಿದೆ. ಮುಂಬರುವ ದಿನಗಳಲ್ಲಿ ದೇವಿಯ ಆಶೀರ್ವಾದದಿಂದ ಊರಿನ ಮಾರಿಕಾಂಬಾ ಜಾತ್ರೆ ನಡೆಯಲಿದ್ದು, ತ್ಯಾಗರ್ತಿ ಪಟ್ಟಣದ ಮುಖ್ಯರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಅಧ್ಯಯನದಿಂದ ಕರ್ತವ್ಯದ ಅರಿವು: ಮಂತ್ರ, ಶಾಸ್ತ್ರಗಳ ಬಗ್ಗೆ ಸರಿಯಾಗಿ ಅಧ್ಯಯನ ಮಾಡಬೇಕು ಎಂದು ತ್ಯಾಗರ್ತಿ ಸತ್ಯಪೀಠದ ಪರಮಹಂಸ ಶ್ರೀಧರ ಭಾರತೀ ಸ್ವಾಮೀಜಿ ಹೇಳಿದರು. ದೇವಾಲಯದ ಶಿಖರ ಕಲಶಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಅಧ್ಯಯನ ಜ್ಞಾನದಿಂದ ನಮ್ಮ ನಿಜವಾದ ಕರ್ತವ್ಯಗಳು ಏನು ಎಂಬುದರ ಅರಿವು ನಮಗೆ ಉಂಟಾಗುತ್ತದೆ ಎಂದು ತಿಳಿಸಿದರು. ಕೊಳಗಿಬೀಸ್ ವಿದ್ವಾನ್ ಕುಮಾರ್ ಭಟ್ ನೇತೃತ್ವದಲ್ಲಿ ಹೋಮ-ಹವನಗಳು ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದಾನಿಗಳು ಹಾಗೂ ಗಣ್ಯರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಕೆ.ಬಿ.ಗಣಪತಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ರಾಜಲಕ್ಷ್ಮೀ ಜೋಷಿ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಉಪಾಧ್ಯಕ್ಷೆ ರೇಣುಕಾ ಸುರೇಶ್, ಸದಸ್ಯರಾದ ಗೀತಾ ಪರಶುರಾಮ್, ಎಚ್.ಗಿರೀಶ್, ಮಧುಸೂದನ, ಪರಶುರಾಮ್, ಉಡುಪಿ ವಾಣಿಜ್ಯ ತೆರಿಗೆ ಆಯುಕ್ತ ಎಚ್.ಹೊಳಿಯಪ್ಪ, ಅರುಣ್ ನಾಯಕ್, ಸಮಿತಿ ಕಾರ್ಯದರ್ಶಿ ಮೋಹನ್, ಟಿ.ಕೆ.ಕೃಷ್ಣಪ್ಪ, ಜೈಕುಮಾರ್, ಸೋಮಶೇಖರ್, ಚೇತನ್ರಾಜ್, ಶ್ರೀನಿವಾಸ್ ಇತರರಿದ್ದರು.