

ಸೊರಬ: ತಾಲೂಕಿನ ಜಡೆ-ಕೋಟೆ ಯಡಗೊಪ್ಪ, ಕಲ್ಲಕೊಪ್ಪ ಗ್ರಾಮಗಳ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರಾ ಮಹೋತ್ಸವ ವಿಶೇಷತೆಗಳಿಂದ ಕೂಡಿದ್ದು, ದೇಶ ಕಲ್ಯಾಣಾರ್ಥ ಪೂಜಾ ಉತ್ಸವಗಳನ್ನು ಒಳಗೊಂಡ ಉತ್ಸವ ಇದಾಗಿದೆ. ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಾ.3ರವರೆಗೆ ಜರುಗಲಿದೆ. ಮಹಾರಥೋತ್ಸವ ಸಕಲ ವಾದ್ಯ ಮೇಳಗಳೊಂದಿಗೆ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಉತ್ಸವ ಸಾಗಿತು. ಡೊಳ್ಳು, ಬೆಳ್ತಂಗಡಿಯ ವಂಶಿಕ ಮತ್ತು ತಂಡದವರಿಂದ ಮಿರರ್ ಡ್ಯಾನ್ಸ್ ಭಕ್ತರ ಗಮನ ಸೆಳೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ಭಕ್ತರಿಂದ ಹರಕೆ ತುಲಾಭಾರ ಅರ್ಪಿಸುವ ಕಾರ್ಯ ನಡೆಯಲಿದೆ. ಫೆ. 23ಮತ್ತು 24ರಂದು ಬಯಲು ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ದೇವಿ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರಾ ಸಮಿತಿ ಅಧ್ಯಕ್ಷ ರುದ್ರಗೌಡ ಕಮರೂರು, ಉಪಾಧ್ಯಕ್ಷ ನಟರಾಜ್ ಗೌಡ , ಖಜಾಂಚಿ ವಿರೂಪಾಕ್ಷಪ್ಪ ಎಡಗೊಪ್ಪ, ಪ್ರಧಾನ ಕಾರ್ಯದರ್ಶಿ ಬಸವಂತಪ್ಪ ಕೋಟೆ, ಗೌರವಾಧ್ಯಕ್ಷ ರಘು ಕಲ್ಕೊಪ್ಪ, ಕಾರ್ಯಾಧ್ಯಕ್ಷ ನಿಂಗಪ್ಪ, ಕಾರ್ಯದರ್ಶಿ ನಾರಾಯಣಪ್ಪ, ವೀರೇಶ್, ಚಂದ್ರಪ್ಪ, ಸಮಿತಿ ಸದಸ್ಯರು, ಅಕ್ಕಪಕ್ಕದ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.