ಹೆಚ್ಚಿನ ಅನುದಾನಕ್ಕೆ ಎಂಎಡಿಬಿ ಬೇಡಿಕೆ

MADB
Published on

ಶಿವಮೊಗ್ಗ: ಎಂಎಡಿಬಿ(ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ)ಗೆ ಮುಂದಿನ ಆರ್ಥಿಕ ವರ್ಷದಲ್ಲಿ ಕನಿಷ್ಠ 300 ಕೋಟಿ ರೂ. ಅನುದಾನ ನೀಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಸಂಬಂಧ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಬೇಕು ಎಂಬ ಒಮ್ಮತದ ಅಭಿಪ್ರಾಯ ಶನಿವಾರ ನಡೆದ ಮಂಡಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.

ಕಳೆದ ಆರ್ಥಿಕ ವರ್ಷದ ಆರಂಭದಲ್ಲಿ 33 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿತ್ತು. 26 ಕೋಟಿ ರೂ. ಅನುದಾನ ಲಭ್ಯವಾಗಿತ್ತು. ಬಳಿಕ ಸಿಎಂ ಭೇಟಿಯಾಗಿ ಎಲ್ಲ ಸದಸ್ಯರಿಗೂ ತಲಾ ಒಂದು ಕೋಟಿ ರೂ. ಅನುದಾನ ನೀಡುವಂತೆ ಒತ್ತಾಯಿಸಿದ್ದರ ಪರಿಣಾಮ ಒಟ್ಟು 100 ಕೋಟಿ ರೂ. ಅನುದಾನ ಲಭ್ಯವಾಗಿತ್ತು ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು.

ನಾಮನಿರ್ದೇಶಿತ ಸದಸ್ಯರಿಂದಲೂ ತಲಾ 25 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆ ತರಿಸಿಕೊಂಡು ಸರ್ಕಾರಕ್ಕೆ ಕಳಹಿಸಲಾಗುವುದು. ಅದಕ್ಕೂ ಅನುದಾನ ಪಡೆಯುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ. ನಾಮನಿರ್ದೇಶಿತ ಸದಸ್ಯರ ಪ್ರದೇಶದ ಅಭಿವೃದ್ಧಿಗೂ ಮಂಡಳಿ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net