

ಶಿವಮೊಗ್ಗ: ಜಿಲ್ಲೆಯಲ್ಲಿ ಬಾಕಿ ಇದ್ದ 11 ಸಾವಿರಕ್ಕೂ ಅಧಿಕ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ, ಚೆಕ್ ಬೌನ್ಸ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಬೃಹತ್ ಲೋಕ್ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಹೇಳಿದರು.
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಅದಾಲತ್ ನಡೆಸಿದ ಅವರು, ಜಿಲ್ಲೆಯಲ್ಲಿ ಒಟ್ಟಾರೆ ರಾಜಿ ಮಾಡಿಕೊಳ್ಳಬಹುದಾದ 50,204 ಪ್ರಕರಣಗಳಿದ್ದು ಅದರಲ್ಲಿ 16,730 ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಶುಕ್ರವಾರದವರೆಗೆ 11 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ ಎಂದರು.
2021ರ ಮೊದಲ ಲೋಕ್ ಅದಾಲತ್ ಇದಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಮೆಗಾ ಅದಾಲತ್‌ನಲ್ಲಿ 13,138 ಪ್ರಕರಣ ಗುರುತಿಸಿದ್ದು 7,551 ಪ್ರಕರಣ ವಿಲೇವಾರಿ ಮಾಡಲಾಗಿತ್ತು. ಈ ಬಾರಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಹಿಂದೂ ವಾರಸು ಕಾಯ್ದೆ, ವಿಭಜನೆ ಹಾಗೂ ಇನ್ನಿತರ ಪ್ರಕರಣಗಳನ್ನೂ ಗುರುತಿಸಿ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆ ಪ್ರಕಾರವೇ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಅಪಘಾತದಲ್ಲಿ ಎರಡೂ ಕಣ್ಣು ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಯುನೈಟೆಡ್ ವಿಮಾ ಕಂಪನಿಯಿಂದ 17 ಲಕ್ಷ ರೂ. ಹಾಗೂ ಲಾರಿ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ನ್ಯಾಷನಲ್ ವಿಮಾ ಕಂಪನಿ ಮುಖಾಂತರ 18 ಲಕ್ಷ ರೂ. ಮೌಲ್ಯದ ಚೆಕ್‌ಗಳನ್ನು ವಿತರಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಎನ್.ಸರಸ್ವತಿ, ವಕೀಲರ ಸಂಘದ ಅಧ್ಯಕ್ಷ ಕೆ.ದೇವೇಂದ್ರಪ್ಪ ಉಪಸ್ಥಿತರಿದ್ದರು.