

ಸೊರಬ: ಜಾತಿ, ಮತ ಭೇದ ಮರೆತು ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬದುಕಿದಾಗ ಸಾರ್ಥಕತೆ ಕಾಣಬಹುದು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನಕೇರಿಯ ಶ್ರೀ ದುರ್ಗಾಪರಮೇಶ್ವರಿ ಹಾಗೂ ಭೂತೇಶ್ವರ ಸ್ವಾಮಿಯ ಮೂರನೇ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಅಪ್ಪು ವೃತ್ತದಲ್ಲಿ ಏರ್ಪಡಿಸಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಯಕದ ಜತೆಯಲ್ಲಿ ಭಗವಂತನ ಆಧ್ಯಾತ್ಮಿಕ ಪ್ರೇರಣೆಯಿಂದ ಮನುಷ್ಯ ಸಮೃದ್ಧ ಜೀವನ ಕಾಣಲು ಸಾಧ್ಯ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಶರಣರ ದರ್ಶನ ಮತ್ತು ಆಶೀರ್ವಾದ ಪಡೆದು ಉತ್ತಮ ನಾಗರಿಕರಾಗಿ ಬದುಕುವ ಪ್ರಯತ್ನ ನಡೆಸಬೇಕು. ಜೀವನದಲ್ಲಿ ಹಣ, ಆಸ್ತಿ ಸಂಪತ್ತು ಇಲ್ಲದಿದ್ದರೂ ಇರುವುದರಲ್ಲಿಯೇ ತೃಪ್ತಿಪಟ್ಟು ನೆಮ್ಮದಿ ಬದುಕು ನಡೆಸುವವರು ನಿಜವಾದ ಪುಣ್ಯವಂತರು ಎಂದರು.
ಕಷ್ಟದಲ್ಲಿರುವವರನ್ನು ಕಂಡಾಗ ಸಹಾಯಹಸ್ತ ನೀಡುವ ಭಾವನೆ ಬೆಳೆಸಿಕೊಳ್ಳಬೇಕು. ಉತ್ತಮ ಸಮಾಜ ಮತ್ತು ಲೋಕಕಲ್ಯಾಣ ಕಾರ್ಯಗಳಿಗೆ ಭಗವಂತನಿಗೆ ಪೂಜೆ ಪುನಸ್ಕಾರ ಮಾಡಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಕುಟುಂಬದಲ್ಲಿ ಸಂತಸ ಕಾಣಬಹುದು ಎಂದು ತಿಳಿಸಿದರು.
ಎಚ್.ಗುರುಮೂರ್ತಿ ಮತ್ತು ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಶಂಕರ ಶೇಟ್, ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಕೆರಿಯಪ್ಪ, ಬಂಗಾರಪ್ಪ ಜಡೆಕರ್, ಈರೇಶ್ ಮೇಸಿ, ರಾಜು ಪಾಟೀಲ್, ಪ್ರಶಾಂತ್ ಮೇಸಿ, ರೂಪಾ, ಪ್ರಗತಿ ಇತರರಿದ್ದರು.