ಮಹಾತ್ಮರ ಮಾರ್ಗವನ್ನು ಅನುಸರಿಸೋಣ

02 tth 01
ತೀರ್ಥಹಳ್ಳಿಯಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿಯಲ್ಲಿ ಸಮಾಜ ಸೇವಕರಾದ ಆಗುಂಬೆಯ ಜೆನ್ನಿಬಾಯಿ ಮತ್ತು ಹಾರೋಗುಳಿಗೆ ವೆಂಕಟೇಶಯ್ಯ ಅವರನ್ನು ಗೌರವಿಸಲಾಯಿತು. ಆರಗ ಜ್ಞಾನೇಂದ್ರ, ರಹಮತ್ ಉಲ್ಲಾ ಅಸಾದಿ, ಎಸ್.ರಂಜಿತ್, ಎಂ.ಶೈಲಾ ಇತರರಿದ್ದರು.
Published on

ತೀರ್ಥಹಳ್ಳಿ: ಮಹಾತ್ಮರ ದಿನಾಚರಣೆ ಸಾಂಕೇತಿಕ ಆಗುತ್ತಿದ್ದು, ಇದೇ ಮನೋಭಾವ ಮುಂದುವರಿದರೆ ಮುಂದಿನ ಪೀಳಿಗೆಯು ಗಾಂಧಿ ಯಾರೆಂದು ಕೇಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸಿ ಅವರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ಶಾಂತಿ ನಡಿಗೆ ಉದ್ಘಾಟಿಸಿ ಮಾತನಾಡಿ, ಮಹಾತ್ಮರನ್ನು ಅನುಸರಿಸದ ನಾವು ಅವರ ಮೌಲ್ಯಗಳನ್ನು ದಿನನಿತ್ಯ ಸಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ಬದುಕು, ನಡವಳಿಕೆಯಿಂದ ಇಂದಿಗೂ ಪ್ರಸ್ತುತರಾಗಿ ಗಾಂಧಿ ಆದರ್ಶರಾಗಿದ್ದಾರೆ. ಸರಳ ಸಜ್ಜನಿಕೆಯ ಲಾಲ್ ಬಹದೂರ್ ಶಾಸ್ತ್ರಿ ಅವರು ಕೂಡ ನುಡಿದಂತೆ ನಡೆದವರು ಎಂದರು. ಕ್ರೈಸ್ತ್ರ ಧರ್ಮಗುರು ವೀರೇಶ್ ವಿಕ್ಟರ್ ಮೋರೆಸ್ ಮಾತನಾಡಿ, ಅಹಿಂಸೆ ಅತ್ಯಂತ ಶಕ್ತಿಯುತ ಆಯುಧ. ಮಹಾತ್ಮರ ಆಶಯದಂತೆ ಶಾಂತಿ ಸೌಹಾರ್ದದಿಂದ, ಮಾನವೀಯ ಮನೋಭಾವದಿಂದ ಬದುಕಬೇಕಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಆಗುಂಬೆ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ನಡೆದ ಶಾಂತಿ ನಡಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಮೇಗರವಳ್ಳಿ ಚೌಕದ ತಮ್ಮಣ್ಣ ಭಟ್ಟರು ಗಾಂಧಿ ವೇಷ ಧರಿಸಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಒ ಎಂ.ಶೈಲಾ, ತಾಲೂಕು ಮುಸ್ಲಿಂ ಒಕ್ಕೂಟದ ಮಹಮದ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ರಾಘವೇಂದ್ರ, ಪತ್ರಕರ್ತ ಡಾನ್ ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net