

ಸಾಗರ: ಗ್ರಾಮೀಣ ಉತ್ಪನ್ನಗಳಿಗೆ ಬಹುಬೇಡಿಕೆ ಇದ್ದು, ಮಲೆನಾಡಿನ ಉತ್ಪನ್ನಗಳಿಗೆ ವಿಶೇಷ ಪ್ರಾಮುಖ್ಯತೆ ಸಿಗುತ್ತಿದೆ. ಇಂತಹ ಉದ್ಯಮಗಳನ್ನು ನಡೆಸಲು ಯುವಜನತೆ ಮುಂದಾಗಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ನಗರದ ಲಾಲ್‌ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ಕಾಲೇಜಿನ ದೇವರಾಜ ಅರಸು ಕಲಾಕೇಂದ್ರದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ವಾಣಿಜ್ಯ ವಿಭಾಗ ಮತ್ತು ರಾಯಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಲೆನಾಡಿನಲ್ಲಿ ಹಲಸು, ಅಗರಬತ್ತಿ ತಯಾರಿಕೆ, ಜೇನುತುಪ್ಪ ತಯಾರಿಕೆ, ಬೆಲ್ಲದ ಚಹಾ, ಚಿಕ್ಕಿ ತಯಾರಿಕೆ, ಕಬ್ಬು ಬೆಳೆ, ಗೇರುಬೀಜ, ಗೇರು ಹಣ್ಣಿನಿಂದ ಜ್ಯೂಸ್ ತಯಾರಿಕೆ, ಕುರಿ ಸಾಕಣೆ, ಸಸ್ಯ ನರ್ಸರಿ, ಅಣಬೆ ಉತ್ಪನ್ನ, ವಿವಿಧ ರೀತಿ ಅವಲಕ್ಕಿ ತಯಾರಿಕೆ ಹೀಗೆ ವೈವಿಧ್ಯ ಉದ್ದಿಮೆಗಳಿಗೆ ಅವಕಾಶಗಳಿವೆ. ಡಾ. ಆರ್.ಸಿ.ಜಗದೀಶ್ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ
ದೇಶಾದ್ಯಂತ ಪ್ರತಿ ವರ್ಷ ಕೋಟ್ಯಂತರ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಾರೆ. ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ಕೆಲವರು ಐಎಎಸ್, ಕೆಎಎಸ್‌ನಂತರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಉದ್ಯಮ ನಡೆಸಲು ಕಾಲೇಜು ದಿನಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಉದ್ಯಮದ ಯಶಸ್ಸಿಗೆ ಕೌಶಲ ಅಗತ್ಯ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯ ರೈತಸ್ನೇಹಿ ಸಂಶೋಧನೆ ಕೈಗೊಳ್ಳಬೇಕು. ಇದರಿಂದ ಕಡಿಮೆ ಖರ್ಚಿನಲ್ಲಿ ರೈತಾಪಿ ಕೆಲಸಗಳು ಆಗುವಂತಾಗಬೇಕು. ಶಿಕ್ಷಣ ಪಡೆದವರು ಸ್ವಉದ್ಯಮ ಆರಂಭಿಸಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಬೇಕು. ಎಂ.ಹರನಾಥ ರಾವ್ ಎಂಡಿಎಫ್ ಅಧ್ಯಕ್ಷ
ಉದ್ದಿಮೆದಾರರಾದ ಅಬ್ದುಲ್ ಜಲೀಲ್, ಫೆನಿಕ್ಸ್, ಬಿ.ಎ.ಇಂದೂಧರ, ಎಸ್.ಚಂದ್ರಮೋಹನ್, ಸಿ.ಆರ್.ರಾಜೇಶ್, ಗಿರೀಶ್ ಹಕ್ರೆ, ವಾಣಿ ಅರುಣ್, ಕೆ.ಎಚ್.ಗಿರೀಶ್, ಸಮರ್ಥ ಬಡ್ಕುಮನೆ, ಎಸ್.ಕೆ.ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಬಿ.ಆರ್.ಜಯಂತ್, ಖಜಾಂಚಿ ಕೆ.ವೆಂಕಟೇಶ್ ಕವಲಕೋಡು, ಪ್ರಾಚಾರ್ಯ ಡಾ. ಎ.ಎಸ್.ಲಕ್ಷ್ಮೀಶ್, ಡಾ. ಪಿ.ಎಸ್.ಸುಮುಖ, ಡಾ. ರಾಘವೇಂದ್ರ ಇತರರಿದ್ದರು.
ಕಾಲೇಜಿನಲ್ಲಿ ಈವರೆಗೆ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯಮ ಸ್ಥಾಪಿಸಿ ಹತ್ತಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಪ್ರಸ್ತುತ 2500 ವಿದ್ಯಾರ್ಥಿಗಳಿದ್ದು, ಶಿಕ್ಷಣದ ಜತೆಯಲ್ಲಿ ಬದುಕು ರೂಪಿಸಿಕೊಳ್ಳಲು ಪೂರಕ ತರಬೇತಿ ಕಾರ್ಯಕ್ರಮ ನಡೆಸುತ್ತೇವೆ. ಡಾ. ಎಚ್.ಎಂ.ಶಿವಕುಮಾರ್ ಎಂಡಿಎಫ್ ಪ್ರಧಾನ ಕಾರ್ಯದರ್ಶಿ
ಉದ್ದಿಮೆಯಲ್ಲಿ ಎದುರಾಗುವ ತೊಂದರೆಗಳೇನು ವಿಷಯ ಕುರಿತು ನಾರಿಶಕ್ತಿ ಪ್ರಶಸ್ತಿ ಪುರಸ್ಕೃತ ನೊಮಿಟೊ ಕಾಮದಾರ್ ಉಪನ್ಯಾಸ ನೀಡಿದರು. ಮಲ್ಲಿಕಾ ಆಟ್ಛೊಉ ಸೆಂಟರ್‌ನ ಕೆ.ಗುರುಪ್ರಸಾದ್ ಹಾಜರಿದ್ದರು. ಉದ್ಯಮಶೀಲತೆಯ ಅವಕಾಶಗಳು ಕುರಿತು ಮಂಜುನಾಥ ಸುವರ್ಣಗದ್ದೆ ಉಪನ್ಯಾಸ ನೀಡಿದರು. ಉದ್ಯಮಿ ಎಸ್.ರವೀಂದ್ರ ಭಟ್, ಕೆ.ವೆಂಕಟೇಶ್ ಹಾಜರಿದ್ದರು.