

ಶಿಕಾರಿಪುರ: ಪ್ರತಿಯೊಬ್ಬರೂ ವೈಚಾರಿಕ ನಿಲುವುಗಳನ್ನು ಹೊಂದಿರಬೇಕು. ವಿಚಾರಧಾರೆಗಳು ಸಮಾಜೋತ್ಥಾನಕ್ಕೆ ಪೂರಕ ಆಗಿರಬೇಕು. ಸಾಮಾಜಿಕ ಕಳಕಳಿಯಿಂದ ಸದ್ವಿಚಾರಗಳು ಸೃಜಿಸುತ್ತವೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಈಸೂರಿನಲ್ಲಿ ಏರ್ಪಡಿಸಿದ್ದ ತೋಂಟದಾರ್ಯ ಮಠದ ಮೂರು ಶತಮಾನಗಳ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಲಿಂ. ಶ್ರೀ ನಂದೀಶ್ವರ ಸ್ವಾಮೀಜಿ ಅವರು ವೈಚಾರಿಕ ನೆಲೆಗಟ್ಟಿನ ಮೇಲೆ ಧರ್ಮ ಜಾಗೃತಿ ಮೂಡಿಸಿದವರು. ಯಡಿಯೂರಿನಿಂದ ಸಂಚಾರ ಮಾಡುತ್ತ ಈಸೂರಿಗೆ ಬಂದು ಮಠವನ್ನು ಸ್ಥಾಪಿಸಿ ಧರ್ಮ ಕಾರ್ಯ ಮಾಡಿದವರು ಎಂದು ತಿಳಿಸಿದರು.
ಈಸೂರಿನ ಮಣ್ಣು ಸ್ವಾಭಿಮಾನಿ ಮತ್ತು ರಾಷ್ಟ್ರಭಕ್ತಿಯ ಮಣ್ಣು. ಸ್ವಾತಂತ್ರೃಪೂರ್ವದಲ್ಲಿಯೇ ಸ್ವಾತಂತ್ರೃ ಘೋಷಿಸಿಕೊಂಡ ಮತ್ತು ದೇಶದ ಸ್ವಾತಂತ್ರೃಕ್ಕಾಗಿ ಹುತಾತ್ಮರಾದ ದೇಶಭಕ್ತರ ನೆಲವಿದು. ಇಂತಹ ನೆಲದಲ್ಲಿ 300 ವರ್ಷಗಳ ಹಿಂದೆ ತೋಂಟದಾರ್ಯ ಮಠ ಕಟ್ಟಿ ಅರಿವಿನ ಧಾರೆ ಎರೆದವರು ಶ್ರೀ ನಂದೀಶ್ವರ ಸ್ವಾಮಿಗಳು. ಅವರ ಸಂದೇಶಗಳೇ ನಮಗೆ ದಿವ್ಯ ಮಂತ್ರಗಳಾಗಬೇಕು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೆಹಳ್ಳಿ ಮಠ
ಎಲ್ಲ ಕಾರ್ಯಕ್ರಮಗಳ ಉದ್ಘಾಟನೆ ನಗಾರಿ ಬಾರಿಸುವ ಮೂಲಕ, ಸಸಿಗೆ ನೀರೆರೆಯುವ ಮೂಲಕ, ದೀಪ ಬೆಳಗುವ ಮೂಲಕ ಮಾಡುತ್ತಾರೆ. ಆದರೆ ಇಲ್ಲಿ ವಿಭೂತಿ ಹಚ್ಚುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ನಮ್ಮ ಆಚಾರ ವಿಚಾರಗಳು ನಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತವೆ. ವಿಭೂತಿ ಎಂದರೆ ಬಂಗಾರ, ವಿಭೂತಿ ಧಾರಣೆಯಿಂದ ನಮ್ಮ ಬದುಕು ಉಜ್ವಲವಾಗುತ್ತದೆ ಎಂದರು. ಡಂಬಳ ಗದಗದ ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿ, ಸಂತರು ಸಮಾಜದ ಉನ್ನತಿಗೆ ಸಮರ್ಪಿಸಿಕೊಂಡವರು. ಅಂತಹ ಸಾಲಿನಲ್ಲಿ ಯಡಿಯೂರು ಮಠದ ಶ್ರೀ ನಂದೀಶ್ವರ ಸ್ವಾಮೀಜಿ ಒಬ್ಬರು. ಮೂರು ಶತಮಾನಗಳ ಹಿಂದೆ ಅವರು ಕಟ್ಟಿದ ಶ್ರೀಮಠಕ್ಕೆ ಈಗ ಕಾಯಕಲ್ಪ ನಡೆಯುತ್ತಿದೆ ಎಂದು ಹೇಳಿದರು.
ಶ್ರೀ ನಂದೀಶ್ವರ ಸ್ವಾಮೀಜಿ ಅವರು ಅಣ್ಣಿಗೇರಿಯಲ್ಲಿ ಈಸೂರು ಸ್ವಾಮಿಗಳೆಂದೇ ಖ್ಯಾತರಾಗಿ ಲಿಂಗೈಕ್ಯರಾದರು. ಅವರೊಬ್ಬ ಮಹಾನ್ಚೇತನ, ಪವಾಡ ಪುರುಷರು ಆಗಿದ್ದರು. ಧರ್ಮದ ಜತೆ ಸಾಮಾಜಿಕ ಚಿಂತನೆ ಬಿತ್ತಿದರು. ಅವರಿಂದ ನಿರ್ಮಾಣವಾದ ಮಠ ಮತ್ತೆ ಧರ್ಮಜಾಗೃತಿಗೆ ಮುಂದಾಗಬೇಕು. ಈ ಭಾಗದ ಜನತೆಗೆ ಅವರ ಪರಿಚಯವಾಗಬೇಕು. ಅವರ ಚರಿತ್ರೆಯನ್ನು ಮನೆ ಮನೆಗೆ ತಲುಪಿಸಬೇಕು. ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ
ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು. ಅಭಿವೃದ್ಧಿ ಸಮಿತಿ ವ್ಯವಸ್ಥಾಪಕ ಜಗದೀಶ್ ಬಡಕಳ್ಳಿ, ಅಖಿಲ ಭಾರತ ವೀರಶೈವ ಲಿಂಗಾಯತ ರಾಜ್ಯ ನಿರ್ದೇಶಕ ಎನ್.ವಿ.ಈರೇಶ್, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಬಸವರಾಜಪ್ಪ, ಈಸೂರು ಗ್ರಾಪಂ ಅಧ್ಯಕ್ಷೆ ರೇಖಾ ಪಾಟೀಲ್, ಚನ್ನಳ್ಳಿ ತೋಟಪ್ಪ, ಪುಣಜಿ ಕುಮಾರಸ್ವಾಮಿ, ಯೋಗೀಶಪ್ಪ, ಬಸವರಾಜಪ್ಪ ಮತ್ತಿತರರಿದ್ದರು.