

ಸೊರಬ: ಶೈಕ್ಷಣಿಕ ಜೀವನದಲ್ಲಿ ಪೂರಕ ವಿಷಯಗಳ ಕುರಿತು ಅರಿವು ಹೊಂದುವ ಅಗತ್ಯವಿದ್ದು, ದೇಶದ ಇತಿಹಾಸ, ಸ್ವಾತಂತ್ರೃ ಹೋರಾಟದ ಬಗ್ಗೆ ವಿದ್ಯಾರ್ಥಿಗಳು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ನೇತ್ರಾವತಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನ ವಿಷಯಗಳ ಜತೆಗೆ ಭಾಷಾ ಐಚ್ಛಿಕ ವಿಷಯ ಮತ್ತು ದೇಶದ ಇತಿಹಾಸ ಬಗ್ಗೆ ಅರಿವು ಹೊಂದುವುದು ಮುಖ್ಯ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆದಾಗ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಎಚ್.ರಾಜಪ್ಪ ಅವರು ಜಪಾನ್ ಮತ್ತು ಎರಡನೇ ಮಹಾಯುದ್ಧ ಕುರಿತು ವಿಶೇಷ ಉಪನ್ಯಾಸ ನೀಡಿದರು. ಐಕ್ಯೂಎಸಿ ಸಂಚಾಲಕ ಡಾ. ಜಿ.ಆರ್.ಜೋಶಿ, ಇತಿಹಾಸ ವಿಭಾಗದ ಮುಖ್ಯಸ್ಥ ನೇಂದ್ರಪ್ಪ, ಪ್ರಾಧ್ಯಾಪಕರಾದ ಸಿ.ಮಂಜುನಾಥ್, ರವಿ ಕಲ್ಲಂಬಿ, ರಾಘವೇಂದ್ರ ಇತರರಿದ್ದರು.