

ಶಿವಮೊಗ್ಗ: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಎನ್‌ಎಸ್‌ಎಸ್, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವುದು ಅಗತ್ಯ. ಬದುಕು ರೂಪಿಸಿಕೊಳ್ಳಲು ಇಂತಹ ಆಸಕ್ತಿಗಳು ನೆರವು ನೀಡುತ್ತವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವಿದ್ಯಾರ್ಥಿ ಸಾಂಸ್ಕೃತಿಕ, ಎನ್‌ಸಿಸಿ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಒಳ್ಳೆಯ ಗುರುಗಳಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ. ಹೀಗಾಗಿ ನಮಗೆ ಶಿಕ್ಷಣ ನೀಡಿದ ಗುರುಗಳನ್ನು ಎಂದೂ ಮರೆಯಬಾರದು. ನನ್ನ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಬೆಳವಣಿಗೆಗೆ ಶ್ರೀನಿವಾಸ ಮೂರ್ತಿ ಎಂಬ ಗುರುಗಳೂ ಸೇರಿದಂತೆ ಹಲವು ಶಿಕ್ಷಕರು ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವೆ ಎಂಬುದು ವೈಯಕ್ತಿಕ ಸಂತೃಪ್ತಿಯ ಜತೆಗೆ ಸಮಾಜದ ಹಿತವನ್ನೂ ಕಾಪಾಡುತ್ತದೆ. ಅನುಕಂಪ ಕಲಿಸುತ್ತದೆ. ಅನುಭವ ನೀಡುತ್ತದೆ. ಭಾವನೆಗಳನ್ನು ಬೆಳೆಸುತ್ತದೆ. ನಾವೆಲ್ಲರೂ ಒಂದೇ ಎಂಬ ಸಾಮರಸ್ಯವನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಅಂಕಗಳಿಗೆ ಆದ್ಯತೆ ನೀಡುವುದರ ಜತೆಗೆ ಸಮಾಜದ ಸಂಕಷ್ಟಗಳಿಗೂ ಸ್ಪಂದಿಸಬೇಕು ಎಂದರು.
ಹರಟೆ ಖ್ಯಾತಿಯ ಪ್ರೊ.ಇಂದುಮತಿ ಸಾಲಿಮಠ ಮಾತನಾಡಿ, ಕನ್ನಡ ನಮ್ಮ ಅಂತರಂಗದ ಭಾಷೆಯಾಗಬೇಕು. ಸಾಧ್ಯವಾದಷ್ಟು ಸಂಬಂಧವಾಚಕ ಪದಗಳನ್ನು ಕನ್ನಡದಲ್ಲೇ ಬಳಸಬೇಕು. ಸಂಸ್ಕೃತಿ, ಸಂಸ್ಕಾರ ಎಲ್ಲರಿಗೂ ಮುಖ್ಯ. ಅದನ್ನು ನಮ್ಮ ಪರಿಸರದಿಂದ, ಶಿಕ್ಷಣದಿಂದ ಕಲಿಯಬೇಕು ಎಂದು ತಿಳಿಸಿದರು.
ಪ್ರಾಚಾರ್ಯರಾದ ಪ್ರೊ.ಎಂ.ಕೆ.ವೀಣಾ, ಪ್ರೊ.ಕೆ.ಬಿ.ಧನಂಜಯ, ಪ್ರೊ.ಎನ್.ರಾಜೇಶ್ವರಿ, ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಹಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಎಚ್.ಮಂಜುನಾಥ್, ಎನ್‌ಎಸ್‌ಎಸ್ ವಿಭಾಗದ ಸಂಚಾಲಕಿ ಡಾ.ಶುಭಾ ಮರವಂತೆ, ಪ್ರಾಧ್ಯಾಪಕರಾದ ಡಾ.ಎ.ಶಿವಮೂರ್ತಿ, ಡಾ.ಕುಂದನ್ ಬಸವರಾಜ್, ಡಾ. ಕೆ.ವಿ.ಗಿರಿಧರ್, ಡಾ.ಕೆ.ಎಸ್.ಸರಳಾ ಮುಂತಾದವರಿದ್ದರು.