ಕೆ.ಎಚ್.ಶ್ರೀನಿವಾಸ್ ಅಧ್ಯಯನಶೀಲ ರಾಜಕಾರಣಿ

23sgr1
ಸಾಗರದ ಎಲ್‌ಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಎಂಡಿಎಫ್ ಮಾಜಿ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ಸ್ಮರಣೆ ಕಾರ್ಯಕ್ರಮದಲ್ಲಿ ‘ಮಲೆನಾಡ ಮಾತುಗಾರ’ ಪುಸ್ತಕವನ್ನು ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸಿದರು. ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಡಾ. ಕೆ.ಎಸ್.ವೈಶಾಲಿ, ಹರನಾಥರಾವ್ ಮತ್ತಿಕೊಪ್ಪ, ಕವಲಕೋಡು ವೆಂಕಟೇಶ್ ಇತರರಿದ್ದರು.
Published on

ಸಾಗರ: ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಆಳವಾದ ಅಧ್ಯಯನ, ಸದನದ ಬಗ್ಗೆ ಹೆಚ್ಚು ಗೌರವ ಹೊಂದಿದ ಜನಪ್ರತಿನಿಧಿಗಳಲ್ಲಿ ಕೆ.ಎಚ್.ಶ್ರೀನಿವಾಸ್ ಒಬ್ಬರು. ಇಂದಿನ ಸದನಗಳು ಅರ್ಥ ಕಳೆದುಕೊಳ್ಳುತ್ತಿದ್ದು, ಆಗ ಸದನದಲ್ಲಿ ಪ್ರತಿ ದಿನವೂ ಅರ್ಥಪೂರ್ಣ ಚರ್ಚೆ ನಡೆಯುತ್ತಿತ್ತು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಲಾಲ್ ಬಹದ್ದೂರ್ ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಚಾರುಮತಿ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಸ್ಪಂದನ ಸಂಸ್ಥೆ ಸಹಯೋಗದಲ್ಲಿ ಮಾಜಿ ಸಚಿವ, ಎಂಡಿಎಫ್ ಮಾಜಿ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ಸ್ಮರಣೆ ಕಾರ್ಯಕ್ರಮದಲ್ಲಿ ‘ಮಲೆನಾಡ ಮಾತುಗಾರ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಅಂದು ಸದನದ ಶಾಸಕರಲ್ಲಿ ಕೇಳುವ ತಾಳ್ಮೆ ಇರುತ್ತಿತ್ತು. ಈಗ ಓಲೈಸಿ ಶಾಸಕರಿಗೆ ಬೇರೆ ಬೇರೆ ಸೌಲಭ್ಯ ಕೊಟ್ಟು ಉಳಿಸಿಕೊಳ್ಳಬೇಕಾದ ಸ್ಥಿತಿ ಇದೆ. ಶ್ರೀನಿವಾಸ್ ಅವರು ಶಾಸನಸಭೆಗೆ ಬರುವಾಗ ಹೆಚ್ಚು ಅಧ್ಯಯನ ಮಾಡಿಕೊಂಡು ಬರುತ್ತಿದ್ದರು. ಶ್ರೇಷ್ಠ ರಾಜಕಾರಣಿ, ಶಾಸಕ, ಸಚಿವ, ವಿಪಕ್ಷ ನಾಯಕರಾಗಿ ಮಾಡಿದ ಕೆಲಸ ಸ್ಮರಣೀಯ. ಕೆ.ಎಚ್.ಶ್ರೀನಿವಾಸ್ ಅವರು ಸದನದಲ್ಲಿ ತಾವು ಮಾಡಿದ ಚರ್ಚೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಅದನ್ನು ಯುವ ರಾಜಕಾರಣಿಗಳು ಓದುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸಭಾಪತಿಯಾಗಿ, ವಿಧಾನ ಪರಿಷತ್ ಗ್ರಂಥಾಲಯ ಸಮಿತಿ ಅಧ್ಯಕ್ಷನಾಗಿ ಎಚ್.ಡಿ.ದೇವೇಗೌಡ, ಕೆ.ಎಚ್.ಶ್ರೀನಿವಾಸ್ ಕೃತಿಗಳನ್ನು ಖರೀದಿಸಲು ಸೂಚಿಸಿದ್ದೇನೆ. ಇಂತಹ ಕೃತಿಗಳು ಸಾಹಿತ್ಯದ ಮೌಲ್ಯ ಹೆಚ್ಚಿಸುವ ಜತೆಗೆ ಸಾಧಕ ರಾಜಕಾರಣಿಗಳು ನಡೆದ ಹಾದಿ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನೀನಾಸಂನ ಕೆ.ವಿ.ಅಕ್ಷರ, ವಿಮರ್ಶಕ ಟಿ.ಪಿ.ಅಶೋಕ, ಕಾಲೇಜಿನ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಹರನಾಥರಾವ್ ಮತ್ತಿಕೊಪ್ಪ, ಡಾ. ಎಚ್.ಎಂ.ಶಿವಕುಮಾರ್, ಕವಲಕೋಡು ವೆಂಕಟೇಶ್, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಮತ್ತಿತರರಿದ್ದರು.

ಮರೆಯಾಗುತ್ತಿದೆ ಪ್ರಾಮಾಣಿಕತೆ: ಇತ್ತೀಚೆಗೆ ಕೆ.ಎಚ್.ಶ್ರೀನಿವಾಸ್ ಅವರ ಪುತ್ರಿ ನನ್ನ ಬಳಿ ಬಂದಿದ್ದು, ತಾಯಿ ಪಿಂಚಣಿ ಮತ್ತು ಆರೋಗ್ಯ ಸಮಸ್ಯೆಗೆ ವಿಧಾನಸೌಧದ ಕಚೇರಿಗಳಲ್ಲಿ ಕಡತಗಳನ್ನು ಅಲೆದಾಡಿಸುತ್ತಿರುವುದು ಹಾಗೂ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು ಅವರಿಂದ ನನಗೆ ತಿಳಿದು ಬೇಸರವಾಯಿತು. ಎಲ್ಲ ವಿವರಗಳನ್ನು ಪಡೆದು ಒಂದೇ ದಿನಕ್ಕೆ ವ್ಯವಸ್ಥೆ ಸರಿಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆ ಅಧಿಕಾರಿಯನ್ನು ಅಂದೇ ಅಮಾನತು ಮಾಡಿದೆ. ನಮ್ಮ ಆಡಳಿತ ವ್ಯವಸ್ಥೆ ಯಾವ ಮಟ್ಟಿಗೆ ಇಳಿದಿದೆ ಎನ್ನುವ ಬೇಸರ ಕಾಡುತ್ತಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಸುದೀರ್ಘ ರಾಜಕಾರಣ: ವಿಧಾನ ಪರಿಷತ್ ಸದಸ್ಯ, ಸಚಿವನಾಗಿ ಹಲವು ಹುದ್ದೆಗಳನ್ನು ಮುನ್ನಡೆಸಿದ್ದು, 45 ವರ್ಷದಲ್ಲಿ 18 ಮುಖ್ಯಮಂತ್ರಿ, 462 ಸಚಿವರನ್ನು ನೋಡಿದ್ದೇನೆ. ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಾಗ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನು ಆಯ್ಕೆ ಮಾಡಬೇಕು. ಇದರಿಂದ ಆ ಕ್ಷೇತ್ರಕ್ಕೆ ಜೀವ ತುಂಬುವ ಕೆಲಸ ಆಗುತ್ತದೆ ಎಂಬ ನನ್ನ ಅಹವಾಲನ್ನು ಸರ್ಕಾರದ ಗಮನಕ್ಕೂ ತಂದಿದ್ದೇನೆ. ಶಾಸನಸಭೆ ಅತ್ಯಂತ ಪವಿತ್ರವಾದುದು. ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು. ಆ ವಿಚಾರಕ್ಕೆ ನಾನು ಇಂದಿಗೂ ಎಂದಿಗೂ ಬದ್ಧನಾಗಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶ್ರೇಷ್ಠ ರಾಜಕಾರಣಿಗಳನ್ನು ರಾಜ್ಯಕ್ಕೆ ಕೊಡುಗೆ ನೀಡಿದ ನೆಲ ಮಲೆನಾಡು. ಕೆ.ಎಚ್.ಶ್ರೀನಿವಾಸ್ ಅವರೊಂದಿಗೆ ಅನೇಕ ಬಾರಿ ಚರ್ಚಿಸುವ ಅವಕಾಶ ನನಗೆ ಸಿಕ್ಕಿತ್ತು. ಮಾದರಿ ರಾಜಕಾರಣದ ಜತೆಗೆ ಶಿಕ್ಷಣ, ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಪ್ರತಿಷ್ಠಿತ ಎಲ್‌ಬಿ ಕಾಲೇಜು ನಿರ್ಮಿಸಿದ್ದರು.

ಗೋಪಾಲಕೃಷ್ಣ ಬೇಳೂರು

ಶಾಸಕ

ಭಾಷಣ ಕೃತಿಯಲ್ಲಿ ದಾಖಲು: ಶಾಸನಸಭೆಯಲ್ಲಿ ಕೆ.ಎಚ್.ಶ್ರೀನಿವಾಸ್ ಅವರು ಮಾತನಾಡಿದ ಎಲ್ಲ ಭಾಷಣಗಳನ್ನು ಕೃತಿಯಲ್ಲಿ ದಾಖಲಿಸಿದ್ದೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೆ.ಎಸ್.ವೈಶಾಲಿ ಹೇಳಿದರು. ಪುಸ್ತಕದ ಕುರಿತು ಮಾತನಾಡಿ, ನನ್ನ ತಂದೆ ಶ್ರೀನಿವಾಸ್ ಅವರು 9 ಕೃತಿಗಳನ್ನು ರಚಿಸಿದ್ದು, ಈ ಕಾಲೇಜಿನಲ್ಲಿ ಅವರ ಮಲೆನಾಡಿನ ಮಾತುಗಾರ ಪುಸ್ತಕ ಬಿಡುಗಡೆ ಆಗಿರುವುದು ಸಂತಸ ತಂದಿದೆ. ರಾಜಕೀಯ ಶಾಸ್ತ್ರದ ಬೋಧಕರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತ ಕೃತಿ ಆಗಿದೆ. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಸರ್ಕಾರದ ಶಾಸನಸಭೆ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಲು ಆದೇಶಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಧನ್ಯವಾದ ಎಂದು ತಿಳಿಸಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ: ಕೆ.ಜಿ.ಒಡೆಯರ್, ಕೆ.ಎಚ್.ಶ್ರೀನಿವಾಸ್ ಮತ್ತಿತರರು ಸೇರಿ ನಿರ್ಮಿಸಿದ ಶಿಕ್ಷಣ ಸಂಸ್ಥೆಯು ಮಲೆನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು. ನಮ್ಮ ಕಾಲೇಜಿನಲ್ಲಿ ಈವರೆಗೆ 64 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದಿದ್ದಾರೆ. ಗೋಪಾಲಕೃಷ್ಣ ಅಡಿಗರು, ಡಾ. ಚಂದ್ರಶೇಖರ ಕಂಬಾರ, ಜಿ.ಕೆ.ಗೋವಿಂದ ರಾವ್ ಸೇರಿ ಮುಂತಾದ ಮಹನೀಯರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net