

ಸಾಗರ: ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಸಮುದಾಯದಿಂದ ಆಗಬೇಕು. ಅಂಕ ಗಳಿಕೆಯ ಒತ್ತಡದಲ್ಲಿ ಮಕ್ಕಳಲ್ಲಿನ ಪ್ರತಿಭೆ ನಿರ್ಲಕ್ಷೃ ಆಗಬಾರದು ಎಂದು ಸಾಗರ ತಾಲೂಕು ಮಟ್ಟದ ಮಕ್ಕಳ 13ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಬಿ.ಬಿಂದು ಹೇಳಿದರು.
ನಗರದ ಗಾಂಧಿ ಮೈದಾನದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಮಕ್ಕಳ 13ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಭಾಷೆಯನ್ನು ಹೆಚ್ಚು ಸಂವಹನ ನಡೆಸುವ ಮೂಲಕ ಉಳಿಸಿಕೊಳ್ಳಬೇಕು. ಸಾಹಿತ್ಯ ಕ್ಷೇತ್ರಕ್ಕೆ ನಾಡಿನ ಕವಿಗಳು ನೀಡಿರುವ ಕೊಡುಗೆ ಅಪಾರ. ಗಟ್ಟಿತನದ ಸಾಹಿತ್ಯ ಹೊಂದಿರುವ ನೆಲದಲ್ಲಿ ಜನಿಸಿರುವ ನಾವೇ ಪುಣ್ಯವಂತರು ಎಂದು ತಿಳಿಸಿದರು.
ಆರ್ಥಿಕ ಸಹಕಾರ ಒದಗಿಸಿ: ಮಕ್ಕಳ ಸಾಹಿತ್ಯ ಸಮ್ಮೇಳನಗಳಿಗೂ ಸರ್ಕಾರ ಆರ್ಥಿಕ ಸಹಕಾರ ನೀಡಬೇಕು ಎಂದು ಆವಿನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ, ಸಮ್ಮೇಳನಾಧ್ಯಕ್ಷೆ ಬಿ.ಬಿಂದು ಒತ್ತಾಯಿಸಿದರು. ವಿವಿಧ ಬೇಡಿಕೆಗಳ ಕುರಿತು ಪ್ರಸ್ತಾಪಿಸಿ, ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸರ್ಕಾರ ನಡೆಸುವಂತೆ ಆಗಬೇಕು. ಅಖಿಲ ಭಾರತ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಬೇಕು. ಮಕ್ಕಳು ರಚಿಸಿದ ಸಾಹಿತ್ಯವನ್ನು ಸರ್ಕಾರ ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಸರ್ಕಾರಿ ಶಾಲೆಗಳಲ್ಲಿ ನರ್ಸರಿಯಿಂದ ಪಿಯುವರೆಗೆ ಬಿಸಿಯೂಟ ನೀಡಬೇಕು ಎಂದು ಆಗ್ರಹಿಸಿದರು.
ಸಮ್ಮೇಳನ ಉದ್ಘಾಟಿಸಿದ ಅಮಟೆಕೊಪ್ಪ ಹೊಂಗಿರಣ ಶಾಲೆ ವಿದ್ಯಾರ್ಥಿನಿ ಸ್ಫೂರ್ತಿ ಪಿ. ಪೈ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಮೌಖಿಕ ಪರಂಪರೆ ಮೂಲಕ ಜಾನಪದ ನೀಡಿದ ಕೊಡುಗೆ ದೊಡ್ಡದು. ನಂತರದಲ್ಲಿ ಸಾಹಿತ್ಯವನ್ನು ಅಕ್ಷರದ ಮೂಲಕ ಕಟ್ಟಿಕೊಡುವ ಕೆಲಸ ನಿರಂತರವಾಗಿ ನಡೆದಿದೆ. ಬರವಣಿಗೆ ಮೂಲಕ ಬದಲಾವಣೆ ಸಾಧ್ಯ ಎನ್ನುವುದನ್ನು ತೋರಿಸಿಕೊಡಲಾಗಿದೆ ಎಂದರು.
ಸರ್ಕಾರದ ಗಮನ ಸೆಳೆಯುವೆ: ಸಮ್ಮೇಳನದಲ್ಲಿ ಮಂಡಿಸಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷೆ ಬಿ.ಬಿಂದು ಅವರ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿ ಮಾತನಾಡಿ, ಸಮ್ಮೇಳನಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಸಾಹಿತ್ಯ ರಚನೆಯ ಮನೋಪ್ರವೃತ್ತಿ ಬೆಳೆಸಲು ಸಾಧ್ಯ ಎಂದು ತಿಳಿಸಿದರು.
ಸಾಗರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸದಾನಂದ ಶರ್ಮ ಮಾತನಾಡಿ, ಮಕ್ಕಳ ಕನಸುಗಳನ್ನು ಹತ್ತಿಕ್ಕುವ ಕೆಲಸವನ್ನು ಪಾಲಕರು ಮಾಡಬಾರದು. ಓದಿನ ಜತೆಯಲ್ಲಿ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯದ ಚಟುವಟಿಕೆಗೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಬಿಇಒ ಇ.ಪರಶುರಾಮಪ್ಪ, ನಗರಸಭೆ ಆಯುಕ್ತ ಎಚ್.ಕೆ.ನಾಗಪ್ಪ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ತಾಲೂಕು ಜಾನಪದ ಸಾಹಿತ್ಯ ವೇದಿಕೆ ಅಧ್ಯಕ್ಷ ಸತ್ಯನಾರಾಯಣ್, ಚಂದ್ರಶೇಖರ್ ಶಿರವಂತೆ, ಅನೀಶ್ ಶರ್ಮ, ಶ್ರಾವ್ಯಾ ಸಾಗರ್, ಅಶೋಕ್, ನಗರಸಭೆ ಸದಸ್ಯ ಲಿಂಗರಾಜ್, ಸಾಹಿತಿ ವಿ.ಗಣೇಶ್, ಅಶ್ವಿನಿಕುಮಾರ್ ಇತರರಿದ್ದರು.
ಕವಿಗೋಷ್ಠಿ, ವಿದ್ಯಾರ್ಥಿಗಳ ಮೇಲೆ ಆಧುನಿಕ ಸಮೂಹ ಮಾಧ್ಯಮಗಳ ಪ್ರಭಾವ: ಮಾರಕ ಮತ್ತು ಪೂರಕ ಕುರಿತು ಚರ್ಚಾಗೋಷ್ಠಿ, ಆಧುನಿಕ ಮಾಧ್ಯಮಗಳ ಸದ್ಬಳಕೆ, ಸಾಹಿತ್ಯ ಕೃತಿಗಳ ಓದಿನ ಮಹತ್ವ ಕುರಿತು ವಿಚಾರಗೋಷ್ಠಿ ನಡೆದವು. ಮಾಸೂರು ಶಾಲೆಯ ದಿಶಾ, ಪ್ರಜ್ಞಾಭಾರತಿ ಶಾಲೆಯ ಶ್ರೀಲಕ್ಷ್ಮೀ, ಹೊಂಗಿರಣದ ಮುರಳಿ, ಮಾಸೂರಿನ ಪೃಥ್ವಿ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.