ಲವ್ ಜಿಹಾದ್-ಹಲಾಲ್ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ

HJS
Published on

ಶಿವಮೊಗ್ಗ: ರಾಜ್ಯದಲ್ಲಿ ಲವ್ ಜಿಹಾದ್ ನಿಯಂತ್ರಿಸಲು ಪ್ರತ್ಯೇಕವಾದ ಪೊಲೀಸ್ ದಳ ಸ್ಥಾಪಿಸಬೇಕು. ವಾಣಿಜ್ಯ ವಹಿವಾಟಿನಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಬೇಕು. ಈ ಸಂಬಂಧ ಇದೇ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಸಿಲುಕಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಉಡುಪಿ ಮುಂತಾದ ಜಿಲ್ಲೆಗಳಲ್ಲಿ ಲವ್ ಜಿಹಾದ್ ಸಮಸ್ಯೆ ಹೆಚ್ಚುತ್ತಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ಕಡಿಮೆಯಾಗಿಲ್ಲ.

ಇದರಲ್ಲಿ ಕೆಲವು ಮುಸ್ಲಿಂ ಸಂಘಟನೆಗಳೂ ಭಾಗಿಯಾಗಿರುವ ಅನುಮಾನಗಳಿವೆ. ಇಂತಹ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು. ಉತ್ತರ ಪ್ರದೇಶದ ಮಾದರಿಯಲ್ಲಿ ಲವ್ ಜಿಹಾದ್ ತಡೆಗಟ್ಟಲು ವಿಶೇಷ ಪೊಲೀಸ್ ದಳ ಸ್ಥಾಪನೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಾರ್ವಜನಿಕರು ಬಳಸುವ ಉತ್ಪನ್ನಗಳ ಮೇಲೆ ಅನಧಿಕೃತವಾಗಿ ಹಲಾಲ್ ಪ್ರಮಾಣ ಪತ್ರದ ಲಾಂಛನ ಮುದ್ರಿಸಲಾಗುತ್ತಿದೆ. ಇದರಿಂದ ಸಾವಿರಾರು ಕೋಟಿ ರೂ. ವಹಿವಾಟು ನಡೆಸಿ ಬಂದ ಹಣವನ್ನು ದೇಶ ವಿರೋಧಿ ಕೃತ್ಯಕ್ಕೆ ಬಳಸಲಾಗುತ್ತಿದೆ. ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣಪತ್ರ ನೀಡುವುದೇ ಸಂವಿಧಾನ ವಿರೋಧಿಯಾಗಿದೆ. ಇದನ್ನು ಕೂಡಲೇ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ವಿಜಯ ರೇವಣ್ಕರ್, ವಾಗೀಶ್, ವಿಶ್ವನಾಥ್, ಮುಕುಂದ, ಪ್ರದಿಪ್, ಸೆಲ್ವಿ, ಸುಧಾ ಕಾಮತ್, ಸುನೀತಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net