

ಸೊರಬ: ಜಗತ್ತಿನಲ್ಲಿ ಸೃಷ್ಟಿಯ ಪ್ರತಿಯೊಂದು ಅಣುವು ತರಂಗವೇ ಆಗಿದ್ದು, ಇದೇ ಸಂಗೀತದ ಮೂಲತತ್ವವಾಗಿದೆ ಎಂದು ದಂತ ವೈದ್ಯ ಡಾ. ಜ್ಞಾನೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಿಜಗುಣ ರೆಸಿಡೆನ್ಸಿಯಲ್ ಆವರಣದಲ್ಲಿ ಸುಗಮ ಸಂಗೀತ ಪರಿಷತ್ ಬೆಂಗಳೂರು, ಶಿವಮೊಗ್ಗ ಜಿಲ್ಲಾ ಘಟಕ, ಸೊರಬ ತಾಲೂಕು ಘಟಕ ಹಾಗೂ ಗುರುಕುಲದ ಆಶ್ರಯದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂಗೀತ ಜೀವಕುಲದಲ್ಲಿ ಸಾರ್ವತ್ರಿಕವಾಗಿದ್ದರೂ ಮನುಷ್ಯ ಬುದ್ಧಿವಂತಿಕೆ ಹಾಗೂ ಚಾಣಾಕ್ಷತನದಿಂದ ಹೊಸ ಹೊಸ ವಾದ್ಯಗಳನ್ನು ಆವಿಷ್ಕರಿಸುತ್ತಿದ್ದಾನೆ. ವೇದಗಳ ಕಾಲದಿಂದಲೂ ಭಾರತೀಯರ ಸಂಗೀತ ಪರಂಪರೆ ಉತ್ಕೃಷ್ಟವಾಗಿದೆ ಎಂದರು.
ಸಮಾಜ ಸೇವಕ ನಾಗರಾಜ್ ಗುತ್ತಿ ಮಾತನಾಡಿ, ಸಂಗೀತ ಶಿಬಿರಗಳು ಮನುಷ್ಯ ಸಮಾಜಕ್ಕೆ ಅಧ್ಯಾತ್ಮ ಶಿಬಿರಗಳಂತೆ ಶಾಂತಿ ಮತ್ತು ನೆಮ್ಮದಿ ಕೊಡುವ ಕೆಲಸ ಮಾಡುತ್ತವೆ ಎಂದು ತಿಳಿಸಿದರು.
ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ಸೊರಬ ತಾಲೂಕಿನಲ್ಲಿ ಕಲಾವಿದರನ್ನು ಹೆಚ್ಚು ಗೌರವಿಸಲಾಗುತ್ತದೆ. ಸಂಗೀತ ಪ್ರೇಮಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಕಲಾವಿದರನ್ನು ಗೌರವಿಸಿ ಪುರಸ್ಕರಿಸುತ್ತಿದ್ದರು ಎಂದರು.
ಸುಗಮ ಸಂಗೀತ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಗಾಯಕ ಉಪಾಸನ ಮೋಹನ್, ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಚಾರ್, ಸತೀಶ್ ಬೈಂದೂರ್, ಪಾಣಿ ರಾಜಪ್ಪ, ಉಮಾದೇವಿ, ಪೂರ್ಣಿಮಾ ಭಾವೆ, ಲಕ್ಷ್ಮೀ ಮುರಳಿಧರ, ವಸಂತ ಬಾಂಬೂರೆ, ಶರತ್ ಹರ್ಡಿಕರ್, ರಾಜಶೇಖರ, ರೇವಣಪ್ಪ ಬಿದರಗೇರೆ, ಮೋಹನ್ ಸುರಭಿ, ನೆಮ್ಮದಿ ಶ್ರೀಧರ್ ಇತರರಿದ್ದರು.