

ರಿಪ್ಪನ್ಪೇಟೆ: ಮಕ್ಕಳಲ್ಲಿರುವ ಆಸಕ್ತಿ ಹಾಗೂ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಆನಂದಪುರದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಮೈದಾನದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಕ್ಕಿರುವಷ್ಟೇ ಮಹತ್ವ ಕ್ರೀಡೆಗೂ ಇದೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೆ ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಕಾರ್ಯದಲ್ಲಿ ನಿಷ್ಠೆ, ಸತತ ಪರಿಶ್ರಮ ನಿಮ್ಮಲ್ಲಿರಬೇಕು. ಗೆಲುವು ನಿಮ್ಮದಾಗುವುದು ನಿಶ್ಚಿತ. ಸರ್ಕಾರದಿಂದ ಕ್ರೀಡಾಕೂಟ ಆಯೋಜನೆ ಆಗಿದ್ದರೂ ಸಮಗ್ರ ವ್ಯವಸ್ಥೆಗೆ ಬೇಕಾಗುವಷ್ಟು ಅನುದಾನ ನೀಡುವುದಿಲ್ಲ. ದಾನಿಗಳ ಸಹಕಾರ ಅಗತ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯ ಮಲ್ಲಿಕಾರ್ಜುನ, ಎಸ್ಡಿಎಂಸಿ ಅಧ್ಯಕ್ಷ ಈಶ್ವರ್, ಎಲ್.ವೈ.ದಾನೇಶ್, ವರ್ತೇಶ್, ಪ್ರಭಾರ ಬಿಇಒ ಆರ್.ಪಿ.ಚೇತನಾ, ಶೇಷಾಚಲ ನಾಯ್ಕ, ಬಿ.ಪಿ.ಸೋಮಶೇಖರ, ಕರಿಬಸಪ್ಪ, ಶಿಕ್ಷಕ ಚಂದ್ರಪ್ಪ ಇತರರಿದ್ದರು.