ಗುರು-ಶಿಷ್ಯರ ಸಂಬಂಧ ಉತ್ತಮವಿರುವ ಮಠ ಸಮಾಜಕ್ಕೆ ಆದರ್ಶ

21ant1ep
ಆನವಟ್ಟಿ ಸಮೀಪದ ಹಿರೇಮಾಗಡಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ದೇವರ ಚರಪಟ್ಟಾಧಿಕಾರ ಮಹೋತ್ಸವದಲ್ಲಿ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಇತರರಿದ್ದರು.
Published on

ಆನವಟ್ಟಿ: ಗುರುಗಳ ಮಾರ್ಗದರ್ಶನದಂತೆ ಶಿಷ್ಯ ಕೆಲಸ ಮಾಡಿದರೆ ಮಠದಲ್ಲಿ ಸಾಮಾಜಿಕ ಕೆಲಸಗಳು ಹೆಚ್ಚು ನಡೆದು ಆದರ್ಶ ಮಠವಾಗಿ ಬೆಳೆಯುತ್ತದೆ ಎಂದು ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಮಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಹಿರೇಮಾಗಡಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ದೇವರ ಚರಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಭಕ್ತರು ನೂತನ ಶ್ರೀಗಳನ್ನು ವಿಶ್ವಾಸ, ನಂಬಿಕೆ ಹಾಗೂ ಪ್ರೀತಿಯಿಂದ ಕಾಣಬೇಕು. ಮಠದ ಅಭಿವೃದ್ಧಿ ಜತೆಗೆ ಸಮಾಜದ ಕೆಲಸಗಳು ಉತ್ತಮವಾಗಿ ಸಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಮನೆಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಕೆಯಲ್ಲಿ ಮುಳುಗಿರುತ್ತಾರೆ. ಎಲ್ಲ ಸದಸ್ಯರು ಒಂದೊಂದು ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ನಮ್ಮನ್ನು ಅನುಸರಿಸುವ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಹೇಗೆ ಬರಲು ಸಾಧ್ಯ, ಅಗತ್ಯಕ್ಕೆ ತಕ್ಕಷ್ಟು ಬಳಸಿ ಉಳಿದ ಸಮಯವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಬೇಕು ಎಂದು ತಿಳಿಸಿದರು.

ಭಾನುವಾರ ಬ್ರಾಹ್ಮೀ ಮುಹೂರ್ತದಲ್ಲಿ ಹಿರೇಮಾಗಡಿ ವಿರಕ್ತಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ ಅವರು ಶ್ರೀ ಶಿವಯೋಗಿ ದೇವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಿದರು. ಚರಪಟ್ಟಾಧಿಕಾರ ವಹಿಸಿಕೊಂಡ ನೂತನ ಸ್ವಾಮೀಜಿ ಅವರಿಗೆ ಶ್ರೀ ಚನ್ನಬಸವ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.

ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಳಗಾನೂರು ಶ್ರೀ ಶಿವಶಾಂತವೀರ ಶರಣರು, ಸಿದ್ದನಕೊಳ ನಿರಂತರ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಮೂಲೆಗದ್ದೆಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಉಪಸ್ಥಿತರಿದ್ದರು.

ಪಟ್ಟಾಧಿಕಾರ ಸಮಿತಿ ಅಧ್ಯಕ್ಷ ಕೆ.ಪಿ.ರುದ್ರಗೌಡ, ಕಾರ್ಯಾಧ್ಯಕ್ಷ ಬಸಣ್ಣ ಭಾರಂಗಿ, ಉಪಾಧ್ಯಕ್ಷ ಬಸವನಗೌಡ ಮಲ್ಲಾಪುರ, ಸದಸ್ಯ ಗಂಗಾಧರ ಹಿರೇಮಾಗಡಿ, ಬಸವರಾಜ ಆಗಸನಹಳ್ಳಿ, ವಿ.ಕೆ ಪಾಟೀಲ್, ವಿಜೇಂದ್ರ ಸ್ವಾಮಿ ಎಣ್ಣೆಕೊಪ್ಪ, ಸುಧಾ ಶಿವಪ್ರಸಾದ್ ಕುಬಸದ್, ಗೀತಾ ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net