

ತೀರ್ಥಹಳ್ಳಿ: ನೆಲದ ಇತಿಹಾಸ ಅರಿತು ಸಾಮಾಜಿಕ ಮತ್ತು ಮಾನವೀಯ ಕಾಳಜಿ, ಚಿಂತನೆಯೊಂದಿಗೆ ಯುವಜನತೆ ಸಮಾಜದ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದು ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್ ಹೇಳಿದರು.
ತುಂಗಾ ಮಹಾವಿದ್ಯಾಲಯದ ಇತಿಹಾಸ ವಿಭಾಗದಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ, ಇತಿಹಾಸ ಮಂಟಪ ಹಾಗೂ ಪರಂಪರಾ ಕೂಟದಲ್ಲಿ ಪಾಲ್ಗೊಂಡು ಗೋಡೆ ಪತ್ರಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮಾಜದ ಹೊಣೆಗಾರಿಕೆ ಹೆಚ್ಚಿದ್ದು ಅಧ್ಯಯನದ ಮೂಲಕ ಮಹತ್ವ ಅರಿಯಬೇಕು ಎಂದು ತಿಳಿಸಿದರು.
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ಬಹಳ ಮುಖ್ಯವಾಗಿ ನೆಲದ ಸಂಸ್ಕೃತಿ ಮಾನವೀಯ ಉತ್ಕೃಷ್ಟ ಹೊಂದಿದೆ. ಇದರ ಇತಿಹಾಸ, ಜ್ಞಾನ ಪರಂಪರೆ ನಿಮ್ಮ ಜೀವನಕ್ಕೆ ಮಾರ್ಗಸೂಚಿ ಆಗಿದೆ. ನೀವು ಇತಿಹಾಸ ಪರಂಪರೆಯ ರಾಯಭಾರಿಗಳಾಗಿ ರೂಪುಗೊಳ್ಳಬೇಕು. ಎಂ.ಎನ್.ರಮೇಶ್, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ
ನಿವೃತ್ತ ಶಿಕ್ಷಕ ಮಹಮದ್ ಮಾತನಾಡಿ, ಶಿಕ್ಷಕ ವೃತ್ತಿಯ ಶ್ರೇಷ್ಠತೆ, ಹೊಣೆಗಾರಿಕೆ ಹಾಗೂ ವಿದ್ಯಾರ್ಥಿಗಳು ಅನುಸರಿಸಬೇಕಾದ ಸಜ್ಜನಿಕೆಯ ನಡತೆ ಬಗ್ಗೆ ಮಾತನಾಡಿದರು.
ಆಡಳಿತ ಮಂಡಳಿ ಸಹಕಾರ್ಯದರ್ಶಿ ಸೊಪ್ಪುಗುಡ್ಡೆ ರಾಘವೇಂದ್ರ, ನಿಕಟಪೂರ್ವ ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ, ಶೈಕ್ಷಣಿಕ ಸಮಿತಿ ಸಲಹೆಗಾರ ಲೋಕೇಶ್, ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ, ಪಿಯು ಪ್ರಾಚಾರ್ಯ ಕೆ.ಎಲ್.ಪ್ರಸನ್ನ, ಇತಿಹಾಸ ವಿಭಾಗದ ಮುಖ್ಯಸ್ಥ ಬಿ.ಸಿ.ಮೋಹನ್‌ಕುಮಾರ್ ಮತ್ತು ಪ್ರಾಧ್ಯಾಪಕ ರಾಮಾಂಜಿ ಇದ್ದರು.