

ಸೊರಬ: ನಿರಂತರ ಪರಿಶ್ರಮ ಹಾಗೂ ಏಕಾಗ್ರತೆ ಮನೋಭಾವದ ಅಧ್ಯಯನದಿಂದ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರು ರೋಟರಿ ಸಿಟಿ ಸೆಂಟರ್ ಮಾಜಿ ಅಧ್ಯಕ್ಷ ಅಶೋಕ್ ಪಿ. ಭೂಪಾಳಂ ಹೇಳಿದರು.
ತಾಲೂಕಿನ ಆನವಟ್ಟಿಯಲ್ಲಿ ತಾಲೂಕು ಯುವಜನ ಸಂಘ, ಪ್ರಗತಿ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನರು ಒಟ್ಟಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ತಾಲೂಕು ಯುವಜನ ಸಂಘ 32 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತವಾಗಿದ್ದು, 12 ವರ್ಷಗಳಿಂದ ಬೆಂಗಳೂರಿನ ರೋಟರಿ ಸಿಟಿ ಸೆಂಟರ್ ಸಹಕಾರದೊಂದಿಗೆ ಮಾಡಿರುವ ವಿದ್ಯಾನಿಧಿ ಖಾತೆಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುತ್ತಿದೆ. ಆನವಟ್ಟಿ ಭಾಗಕ್ಕೆ ವಾಟರ್ ಫಿಲ್ಟರ್, ಆಂಬುಲೆನ್ಸ್ ಸರ್ವೀಸ್, ನೋಟ್‌ಬುಕ್, ಕಂಪ್ಯೂಟರ್‌ಗಳನ್ನು ವಿತರಿಸಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಉನ್ನತ ಸಾಧನೆ ಮಾಡಲು ಮುಂದಾಗಬೇಕು. ಹೊಸ ಆಲೋಚನೆಗಳೊಂದಿಗೆ ಸಾಧನೆ ಮಾಡಬೇಕು ಎಂದು ಹೇಳಿದರು.
ಆನವಟ್ಟಿ ಹೋಬಳಿ ವ್ಯಾಪ್ತಿಯ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 70, ಕನ್ನಡ ವಿಷಯದಲ್ಲಿ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ಯಾನ್ಸರ್ ಪೀಡಿತನಿಗೆ ಧನ ಸಹಾಯ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಆನವಟ್ಟಿ ಘಟಕದ ಅಧ್ಯಕ್ಷ ಬಸವನಗೌಡ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕಲಂದರ್ ಸಾಬ್, ತಾಲೂಕು ಯುವಜನ ಸಂಘದ ಆನವಟ್ಟಿ ಘಟಕದ ಅಧ್ಯಕ್ಷ ಅಜಿತ್‌ಕುಮಾರ್, ಎಚ್.ಸಿ.ಸಂಪತ್‌ಕುಮಾರ್, ಸಲೀಂ ಬಾಷಾ, ಇ.ಡಿ.ಮಂಜುನಾಥ್, ರಾಮ ನಾಯಕ್, ಕೇಶವ ನಾಯಕ್, ಮೈಲಾರಪ್ಪ, ಸದಾಶಿವ್, ಯಲ್ಲಪ್ಪ, ಅಭಿಲಾಷ್, ಮಹಾಂತೇಶ್, ಸತೀಶ್ ಇತರರಿದ್ದರು.