

ಕಾರ್ಗಲ್: ಕ್ಷೇತ್ರದ ಅಭಿವೃದ್ಧಿ ಜತೆ ನಾಡಿನ ಮಠ ಮಂದಿರಗಳ ಜೀರ್ಣೋದ್ಧಾರಕ್ಕೂ ಶ್ರೀ ಕ್ಷೇತ್ರ ಧರ್ಮಸ್ಥಳ ಆರ್ಥಿಕ ಸಹಾಯ ಒದಗಿಸುತ್ತಿದೆ. ಶ್ರೀ ವೀರೇಂದ್ರ ಹೆಗ್ಗಡೆ ಅವರು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಕುಮಾರ್ ಹೇಳಿದರು.
ಶರಾವತಿ ಕಣಿವೆ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 11 ಅಡಿ ಎತ್ತರದ ಶ್ರೀ ಮುನೇಶ್ವರ ವಿಗ್ರಹ ಸ್ಥಾಪನೆಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ. ಧನ ಸಹಾಯದ ಡಿಡಿ ಹಸ್ತಾಂತರಿಸಿ ಮಾತನಾಡಿ, ಶ್ರೀ ಮಾರಿಕಾಂಬೆ ಸನ್ನಿಧಿಯಲ್ಲಿ ಎರಡು ಮುನೇಶ್ವರರ ವಿಗ್ರಹ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಸಮೀಪದ ಬಿದರೂರು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಅಭಿವೃದ್ಧಿಗೆ 1 ಲಕ್ಷ ರೂ. ಮೊತ್ತದ ಡಿಡಿ ನೀಡಲಾಯಿತು. ತಾಲೂಕು ಯೋಜನಾಧಿಕಾರಿ ಗಿರೀಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಸುಬ್ರಮಣಿ, ಯೋಜನೆ ಮೇಲ್ವಿಚಾರಕ ಗಿರೀಶ್, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಮೋಹನ್ ಪೈ, ವಿ.ಸಂತೋಷ್‌ಕುಮಾರ್, ಪಿ.ಮಂಜುನಾಥ್, ಬಿ.ಉಮೇಶ್, ಅರುಣ್, ಸತೀಶ್ ಮಹಾಲೆ, ಶಿವಪ್ರಸಾದ್, ರವಿ ಪೂಜಾರಿ, ವಿ.ಸುರೇಶ್, ನಾಗೇಂದ್ರ ಮತ್ತಿತರರಿದ್ದರು.