26ಕ್ಕೆ ರೈತರು, ಶ್ರಮಿಕ ವರ್ಗದಿಂದ ಗಣರಾಜ್ಯೋತ್ಸವ ಪರೇಡ್: ರೈತ ಮುಖಂಡ ಎಚ್.ಆರ್.ಬಸವರಾಜಪ್ಪ

IMG-20210118-WA0028 (1)
Published on

ಶಿವಮೊಗ್ಗ: ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಜ.26ರಂದು ಬೆಂಗಳೂರಿನ ರಾಜ ಮಾರ್ಗಗಳಲ್ಲಿ ಟ್ರಾೃಕ್ಟರ್, ಗಾಡಿ ಮತ್ತು ವಾಹನಗಳ ಮೂಲಕ ರೈತ ಮತ್ತು ಶ್ರಮಿಕ ವರ್ಗದಿಂದ ಗಣರಾಜ್ಯೋತ್ಸವ ಪರೇಡ್ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.
ಟ್ರಾೃಕ್ಟರ್, ಗಾಡಿಗಳಿಗೆ ರಾಷ್ಟಧ್ವಜ ಮತ್ತು ರೈತ ಸಂಘಟನೆ ಧ್ವಜಗಳನ್ನು ಹಾಕಿಕೊಂಡು ಪರೇಡ್‌ನಲ್ಲಿ ಭಾಗವಹಿಸುವುದು ಕಡ್ಡಾಯಗೊಳಿಸಿದೆ. ಈ ಮೂಲಕ ದೇಶದ್ರೋಹಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸತತ 59 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರದ ಕಣ್ಣು ತೆರೆದಿಲ್ಲ. 10 ಸಭೆಗಳು ವಿಫಲವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆ 2ನೇ ಸ್ವಾತಂತ್ರೃ ಚಳವಳಿಗೆ ನಾಂದಿ ಹಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಘನತೆ, ಗೌರವ ಇದ್ದರೆ ಅಂದಿನ ಪರೇಡ್‌ಗೆ ಸಹಕರಿಸಬೇಕು ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗದಿಂದ ನೂರು ಟ್ರಾಕ್ಟರ್, ಎತ್ತಿನಗಾಡಿ ಮತ್ತು ಇತರೆ ವಾಹನಗಳಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಸಾಥ್ ನೀಡಲಾಗುವುದು. ತುಮಕೂರು ರಸ್ತೆಯಿಂದ ಸಾವಿರಕ್ಕೂ ಅಧಿಕ ಜನರು ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಣರಾಜ್ಯೋತ್ಸವ ಆಚರಿಸುವ ನೈತಿಕ ಹಕ್ಕು ಕಳೆದುಕೊಂಡಿವೆ. ಪ್ರಜಾಪ್ರಭುತ್ವದ ಹಬ್ಬವನ್ನು ರೈತರು ಮಾಡುವುದು ಸೂಕ್ತವಾಗಿದೆ ಎಂದರು.
ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಕೆ.ಎಲ್.ಅಶೋಕ್, ಡಿಎಸ್‌ಎಸ್(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್.ಹಾಲೇಶಪ್ಪ, ವಕೀಲ ಟಿ.ಅನಿಲ್‌ಕುಮಾರ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net