

ಸೊರಬ: ದೌರ್ಜನ್ಯ ಹಾಗೂ ಶೋಷಿತರನ್ನು ರಕ್ಷಣೆ ಮಾಡುವಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಮತ್ತಷ್ಟು ಬಲಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಪಟ್ಟಣದ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಿಷನ್ ಸುರಕ್ಷಾ ಯೋಜನೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಾವಲು ಸಮಿತಿ ಕೇವಲ ಅಂಕಿ ಸಂಖೆ ನೀಡಿದರೆ ಸಾಲದು, ಪ್ರತಿ ಶಾಲೆ, ಮನೆಗಳಿಗೆ ಭೇಟಿ ನೀಡಿ ವಾಸ್ತವ ಅರಿತು ದುರ್ಬಲರಿಗೆ ರಕ್ಷಣೆ ಮತ್ತು ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಕಡ್ಡಾಯವಾಗಿ ದೂರೆಯುವಂತೆ ಮಾಡಬೇಕು. ಕಾವಲು ಸಮಿತಿಯಲ್ಲಿ ಶಾಲಾ ಕಾಲೇಜು ಮಕ್ಕಳನ್ನು ಸೇರ್ಪಡೆಗೊಳಿಸಿ, ಅವರಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು.
ಅಂಗವಿಕಲ ಮಕ್ಕಳಿಗೆ ಸೌಲಭ್ಯ ಹಾಗೂ ರಕ್ಷಣೆ ಒದಗಿಸಬೇಕು. ಮಕ್ಕಳ ಗ್ರಾಮಸಭೆ ನಡೆಸಬೇಕು. ತಾಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಕಾವಲು ಸಮಿತಿ ಸಭೆ ನಡೆಸಿ ಅದರ ವರದಿ ನೀಡುವುದರ ಜತೆಗೆ ದೌರ್ಜನ್ಯ ಹಾಗೂ ಶೋಷಿತ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಗುರುದತ್ತ ಹೆಗಡೆ ಜಿಲ್ಲಾಧಿಕಾರಿ
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಪ್ರತಿ ಶಾಲೆಗೆ ಕಡ್ಡಾಯವಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ತಿಂಗಳಿಗೆ ಒಮ್ಮೆ ಭೇಟಿ ನೀಡಿ ಮಕ್ಕಳೊಂದಿಗೆ ಮುಕ್ತ ಮಾತುಕತೆ ನಡೆಸಬೇಕು. ಕಾವಲು ಸಮಿತಿ ಪ್ರತಿ ಶಾಲೆಗೆ ಭೇಟಿ ನೀಡಿ ಕೌನ್ಸಲಿಂಗ್ ಮಾಡಬೇಕು. ಮಕ್ಕಳ ಆಸಕ್ತಿಗೆ ಪೂರಕವಾಗಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು. ಅಂಗವಿಕಲ ಮಕ್ಕಳು ಗುರುತಿನ ಕಾರ್ಡ್ ಹೊಂದುವಂತೆ ವೈದ್ಯರು ನೋಡಿಕೊಳ್ಳಬೇಕು. ಅಸಹಾಯಕ ಮಕ್ಕಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಬೇಕು ಎಂದರು.
ಸೊರಬ ತಾಲೂಕಿನಲ್ಲಿ 278 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, 70 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಇನ್ನು 208 ಮಕ್ಕಳು ಸಹ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಬರಬೇಕು. 70 ಮಕ್ಕಳಿಗೆ ಶಾಲಾ ಆಪಾರ್ ಕಾರ್ಡ್ ಇಲ್ಲ, ಅದನ್ನು ಸರಿಪಡಿಸಬೇಕು. ತಾಲೂಕಿನಲ್ಲಿ 57 ಅಂಗವಿಕಲ ಮಕ್ಕಳು, 47 ಅನಾಥ ಮಕ್ಕಳು ಹಾಗೂ 11 ವಲಸೆ ಮಕ್ಕಳು ಇದ್ದಾರೆ. 3 ಬಾಲ್ಯವಿವಾಹ ತಡೆಯಲಾಗಿದೆ. 7 ಪೋಕ್ಸೋ ಕೇಸ್ ದಾಖಲಾಗಿವೆ. ಎನ್.ಹೇಮಂತ್ ಜಿಪಂ ಸಿಇಒ
ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಭಾರತಿ ಬಣಕಾರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ತಾಜುದ್ದೀನ್, ಸಾಗರ ಉಪವಿಭಾಗಧಿಕಾರಿ ವೀರೇಶ್‌ಕುಮಾರ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಆರ್.ಮಂಜುನಾಥ. ಇಒ ಕೆ.ಜಿ.ಶಶಿಧರ, ಜಿಲ್ಲಾ ವೀಕ್ಷಣಾಧಿಕಾರಿ ಸಂತೋಷ್‌ಕುಮಾರ್ ಇತರರಿದ್ದರು. ವಿಷನ್ ಸುರಕ್ಷಾ ಅಭಿಯಾನ ನಡೆಸಿದ ಪ್ರಬಂಧ ಸ್ಪರ್ಧೆ ವಿಜೇತರಿಗೆ, ಶಾಲೆ ಮಕ್ಕಳನ್ನು ಕರೆತಂದ ಶಿಕ್ಷಕರಿಗೆ ಹಾಗೂ ಶೇ. 100ರಷ್ಟು ಕಂದಾಯ ವಸೂಲಿ ಮಾಡಿದ ಪಿಡಿಒ ಹಾಗೂ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.